ADVERTISEMENT

ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚು

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಎನ್.ಮಹೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 10:22 IST
Last Updated 18 ಜೂನ್ 2018, 10:22 IST
ಎನ್.ಮಹೇಶ್
ಎನ್.ಮಹೇಶ್   

ಯಳಂದೂರು: ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರ ದಾಖಲಾತಿ ಹೆಚ್ಚಾಗಿದೆ. 32,375 ಹೆಣ್ಣು ಮಕ್ಕಳು ಓದುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಪಟ್ಟಣದ ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮದಿನದ ಅಂಗವಾಗಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2ರಿಂದ 10ನೇ ತರಗತಿಯಲ್ಲಿ 31,444 ಗಂಡು ಹಾಗೂ 32,375 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 63,819 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಹುತೇಕ ಪೋಷಕರು ಗಂಡು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದರೆ, ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಹೆಣ್ಣು ಮಕ್ಕಳನ್ನು ಮಧ್ಯಂತರದಲ್ಲಿ ಶಾಲೆ ಬಿಡುವಂತೆ ಮಾಡುವುದು ಇದರ ಹುನ್ನಾರವಾಗಿದೆ. ಲಿಂಗತಾರತಮ್ಯ ಮಾಡದೇ ಎಲ್ಲರನ್ನೂ ಓದಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಶಿಕ್ಷಕರು ಸಂಸಾರದ ಜಂಜಾಟಗಳನ್ನು ಬಿಟ್ಟು ಒತ್ತಡ ಮುಕ್ತವಾಗಿ ಶಾಲೆಗೆ ಬರಬೇಕು. ಶಾಲೆಯು ಕಲಿಕಾರ್ಥಿಗಳಿಗೆ ಪಂಜರ ಆಗಬಾರದು. ಕಲಿಕೆ ಮಕ್ಕಳ ಮನೋ ಸಾಮರ್ಥ್ಯವನ್ನು ಹಿಗ್ಗಿಸುವಂತಿರಬೇಕು. ಮಕ್ಕಳಿಗೆ ಇಷ್ಟವಾಗುವ ಆಟೋಟಗಳ ಮೂಲಕ ಮನಸ್ಸು ಅರಳುವಂತೆ
ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ನಲಿ–ಕಲಿ ಮತ್ತು ಹತ್ತು ಅಂಶಗಳ ಕಾರ್ಯಕ್ರಮವನ್ನು ಮತ್ತಷ್ಟು ಸದೃಢಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು. ಬೋಧನೆ ಬಿಟ್ಟು ಬೇರೆ ಕೆಲಸ ನಿರ್ವಹಿಸುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರೌಢಶಿಕ್ಷಣ ಮುಗಿಸುವ ವೇಳೆಗೆ ವೃತ್ತಿ ಕೌಶಲ ಮತ್ತು ಸುಲಭವಾಗಿ ಸಂವಹನ ನಡೆಸಲು ಇಂಗ್ಲಿಷ್‌ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲಾಗುತ್ತದೆ. ಇದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.

ದ್ವಿತೀಯ ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಡುಕನಪುರ ಮಠದ ದೇಶಿಕೇಂದ್ರ ಸ್ವಾಮೀಜಿ, ಕಾರಾಪುರ ವಿರಕ್ತ ಮಠದ ಬಸವರಾಜ ಸ್ವಾಮಿ, ಸಂಶೋಧಕ ಡಾ. ಶಿವಕುಮಾರಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಿಂಗರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿರಂಜನ್, ಸದಸ್ಯ ನಾಗರಾಜು ವೈ.ಕೆ. ಮೋಳೆ, ಇಒ ಬಿ.ಎಸ್.ರಾಜು, ವೃತ್ತ ನಿರೀಕ್ಷಕ ರಾಜೇಶ್, ಕೃಷಿ ಸಹಾಯಕ ನಿರ್ದೇಶಕ ದೊಡ್ಡೇಗೌಡ, ಉಪನೋಂದಣಾಧಿಕಾರಿ ನಟರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತರಾಜು, ಜಿಲ್ಲಾಧ್ಯಕ್ಷ ಮಹೇಂದ್ರ, ಕೇಶವಮೂರ್ತಿ, ಚೆನ್ನರಾಜು, ದಾನವ, ಚಿರಂಜೀವಿ, ಕಾಳಿಪ್ರಸಾದ್ ಇತರರು ಹಾಜರಿದ್ದರು.

ಹಾರ ತುರಾಯಿಗಳಿಂದ ದೂರವಿರಿ

ಬೆಳಗಾವಿಯಿಂದ ಬಂದಿದ್ದ ಅಧಿಕಾರಿಯೊಬ್ಬರು ಸಚಿವರನ್ನು ಅಭಿನಂದಿಸಲು ಹಾರ ಹಿಡಿದು ಬಂದರು. ಇದರಿಂದ ಬೇಸರಗೊಂಡ ಸಚಿವ ಎನ್‌.ಮಹೇಸ್‌, ‘ಕಾರ್ಯಕ್ರಮದಲ್ಲಿ ಮಕ್ಕಳು ಬಹಳ ಸಮಯದಿಂದ ಕಾಯುತ್ತಾ ಕುಳಿತಿದ್ದಾರೆ. ನೀವು ಸನ್ಮಾನಕ್ಕಾಗಿ ಹಾರ ತುರಾಯಿ ಹಿಡಿದು ಬಂದಿದ್ದೀರಿ’ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಗುರುಭವನಕ್ಕೆ ಸ್ಥಳ ನೀಡುವಂತೆ ಉಪನಿರ್ದೇಶಕ ಮಹದೇವಪ್ಪ ಹಾಗೂ ಬಿಇಒ ಟಿ. ತಿರುಮಲಾಚಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವ್ ಹಾಗೂ ರಾಜು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.