ADVERTISEMENT

ಟ್ರಕ್ ಡಿಕ್ಕಿ: ಬಳೇಮಂಟಪದ ಸುತ್ತುಗೋಡೆ ಶಿಥಿಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:50 IST
Last Updated 17 ಜುಲೈ 2012, 8:50 IST

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಬಳೇಮಂಟಪದ ಸುತ್ತುಗೋಡೆಗೆ ಸೋಮವಾರ ಮುಂಜಾನೆ ಖಾಸಗಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುತ್ತುಗೋಡೆಯ ಒಂದು ಭಾಗ ಶಿಥಿಲವಾಗಿದ್ದು, ಪಕ್ಕದಲ್ಲೇ ಇರುವ ಮನೆಯೂ ಕೂಡ ಜಖಂಗೊಂಡಿರುವ ಘಟನೆ ಜರುಗಿದೆ.

ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲೇ ಪ್ರಸಿದ್ಧ ಬಳೇಮಂಟಪ ಇದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಮಂಟಪ ತನ್ನ ಕಲ್ಲಿನ ಬಳೆಗಳ ಮೂಲಕವೇ ವಿಶ್ವಪ್ರಸಿದ್ಧಿ ಪಡೆದಿದೆ.

ಸೋಮವಾರ ಮುಂಜಾನೆ ಹೆದ್ದಾರಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಐಶರ್ ಟ್ರಕ್  ವರಹಾಸ್ವಾಮಿ ದೇಗುಲದ ತಿರುವಿನಲ್ಲಿ ಚಾಲಕನ ನಿಂಯಂತ್ರಣ ತಪ್ಪಿ, ಎಡಕ್ಕೆ ಇದ್ದ ಬಳೇಮಂಟಪದ ಸುತ್ತುಗೋಡೆಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗೋಡೆಯ ಕಲ್ಲುಗಳೆಲ್ಲಾ ನೆಲಕ್ಕುರುಳಿ ಪಕ್ಕದಲ್ಲೇ ಇರುವ ಖಾಸಗಿ ಮನೆಯೊಬ್ಬರ ಗೋಡೆಯೂ ಕುಸಿದಿದೆ. ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.

ಈ ತಿರುವಿನಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲದಿರುವುದು ಹಾಗೂ ರಸ್ತೆ ಡುಬ್ಬ ನಿರ್ಮಾಣವಾಗದಿರುವುದೂ ಕೂಡ ಈ ಅಪಘಾತಕ್ಕ ಕಾರಣವಾಗಿದೆ ಎಂದು ಸ್ಥಳೀಯರು ದೂರಿದರು. ಈ ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.