ADVERTISEMENT

ತಂಪುಪಾನೀಯ ಮೊರೆ ಹೋದ ಜನರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 9:16 IST
Last Updated 12 ಡಿಸೆಂಬರ್ 2017, 9:16 IST
ಎಳನೀರಿನಿಂದ ದಾಹ ತಣಿಸಿಕೊಳ್ಳುತ್ತಿರುವ ಜನರು
ಎಳನೀರಿನಿಂದ ದಾಹ ತಣಿಸಿಕೊಳ್ಳುತ್ತಿರುವ ಜನರು   

ಎಸ್‌. ಪ್ರತಾಪ್

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಈಗ ಬಿಸಿಲಿನ ಝಳ ಹೆಚ್ಚಿದೆ. ಪ್ರತಿನಿತ್ಯವೂ ಉಷ್ಣಾಂಶ ಹೆಚ್ಚುತ್ತಿರುವ ಪರಿಣಾಮ ಜನರು ದೇಹ ತಂಪು ಮಾಡಿಕೊಳ್ಳಲು ಎಳನೀರು, ಕಲ್ಲಂಗಡಿ, ತಂಪುಪಾನೀಯಗಳತ್ತ ಮುಖ ಮಾಡಿದ್ದಾರೆ.

ನಗರದ ವ್ಯಾಪ್ತಿಯಲ್ಲಿ ಎಳನೀರು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಸಂತೇಮರಹಳ್ಳಿ ವೃತ್ತ, ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಅಕ್ಕಪಕ್ಕ ಹಾಗೂ ಗುಂಡ್ಲುಪೇಟೆ ವೃತ್ತದಲ್ಲಿ ಎಳನೀರು ವ್ಯಾಪಾರ ಜೋರಾಗಿದೆ. ಕೆಲವು ವ್ಯಾಪಾರಿಗಳು ಒಂದೆಡೆ ಎಳನೀರು ಪೇರಿಸಿಕೊಂಡು ಮಾರಾಟ ಮಾಡುತ್ತಾರೆ. ಕೆಲವರು ಬೈಸಿಕಲ್‌ಗಳಲ್ಲಿ ಎಳನೀರಿನ ಗೊಂಚಲು ಕಟ್ಟಿಕೊಂಡು ಮನೆಮನೆಗೆ ತೆರಳಿ ಮಾರುತ್ತಿದ್ದಾರೆ.

ADVERTISEMENT

ಪ್ರಸ್ತುತ 1 ಎಳನೀರಿಗೆ ಮಾರುಕಟ್ಟೆಯಲ್ಲಿ ₹ 25 ರಿಂದ 30 ಬೆಲೆ ಇದೆ. ಬಿಸಿಲನ ಝಳ ಹೀಗೆಯೇ ಮುಂದುವರಿದರೆ ಧಾರಣೆ ಮತ್ತಷ್ಟು ಹೆಚ್ಚಳವಾದರೂ ಅಚ್ಚರಿಪಡಬೇಕಿಲ್ಲ. ಈ ಬಾರಿ ಮಳೆಗಾಲದ ಅವಧಿಯಲ್ಲಿಯೂ ಎಳನೀರಿನ ಧಾರಣೆ ಕಡಿಮೆಯಾಗಿರಲಿಲ್ಲ.

ಇನ್ನೊಂದೆಡೆ ಜನರ ದಾಹ ತಣಿಸಲು ಕಲ್ಲಂಗಡಿ ಹಣ್ಣು, ತಂಪುಪಾನೀಯಗಳ ವ್ಯಾಪಾರ ಭರಾಟೆಯೂ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ 1 ಕೆಜಿ ಕಲ್ಲಂಗಡಿಗೆ ₹ 20 ರಿಂದ 30 ಬೆಲೆ ಇದೆ.

‘ಜಿಲ್ಲೆಯಲ್ಲಿ ಮಳೆ ಕೊರತೆ ಪರಿಣಾಮ ತೆಂಗಿನಮರಗಳು ಒಣಗಿಹೋಗುತ್ತಿವೆ. ಇದರಿಂದ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ನೀರಾವರಿ ಪ್ರದೇಶಗಳಲ್ಲಿರುವ ತೆಂಗಿನಮರಗಳಿಂದ ಮಾತ್ರವೇ ಸದ್ಯಕ್ಕೆ ಎಳನೀರು ದೊರೆಯುತ್ತದೆ. ಜತೆಗೆ, ನದಿಮೂಲದಿಂದ ನೀರು ಭರ್ತಿಯಾಗಿರುವ ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿರುವ ಹೊಲ, ತೋಟಗಳಲ್ಲಿರುವ ತೆಂಗಿನಮರಗಳಿಂದ ಎಳನೀರು ಲಭಿಸುತ್ತಿದೆ’ ಎಂದು ರೈತ ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಚಂದಕವಾಡಿ, ಉಡಿಗಾಲ, ವೆಂಕಟಯ್ಯನಛತ್ರ, ಆಲೂರು ಭಾಗದಿಂದ ನಗರಕ್ಕೆ ಎಳನೀರು ಪೂರೈಕೆಯಾಗುತ್ತಿದೆ. ರೈತರ ತೋಟಗಳಿಗೆ ನೇರವಾಗಿ ಹೋಗಿ ವ್ಯಾಪಾರಿಗಳು ಖರೀದಿ ಮಾಡುತ್ತಾರೆ. ರೈತರಿಗೆ ಒಂದು ಎಳನೀರಿಗೆ ₹ 18 ನೀಡಬೇಕಿದೆ’ ಎಂದು ಎಳನೀರು ವ್ಯಾಪಾರಿ ಮಹದೇವನಾಯಕ ತಿಳಿಸಿದರು.

‘ಜತೆಗೆ, ತೆಂಗಿನ ಮರದಿಂದ ಎಳನೀರು ಇಳಿಸುವ ಕಾರ್ಮಿಕರಿಗೂ ಪ್ರತ್ಯೇಕವಾಗಿ ಹಣ ನೀಡಬೇಕು. ತೋಟಗಳಿಂದ ನಗರಕ್ಕೆ ಸರಕು ಸಾಗಣೆ ಆಟೊಗಳ ಮೂಲಕ ತರಬೇಕಿದೆ. ಹೀಗಾಗಿ, ದುಬಾರಿ ಸಾಗಣೆ ವೆಚ್ಚ ಭರಿಸಬೇಕಿದೆ. ನಮ್ಮ ಕೂಲಿಯನ್ನೂ ಸೇರಿಸಿಕೊಂಡರೆ ಸ್ವಲ್ಪ ಲಾಭ ಬರುತ್ತದೆ’ ಎಂದರು.

ತರಕಾರಿ     ಬೆಲೆ(ಕೆಜಿಗೆ):
ಹಸಿಮೆಣಸಿಕಾಯಿ   ₹ 30
ಟೊಮೆಟೊ ₹ 10
ಬೂದುಗುಂಬಳ ₹ 15
ಸಿಹಿಕುಂಬಳ ₹ 15
ಬಿಳಿ ಬದನೆಕಾಯಿ ₹ 30
ಬೀನ್ಸ್‌ ₹ 30
ಕ್ಯಾರೆಟ್‌ ₹ 30
ಸೌತೆಕಾಯಿ ₹ 20
ಆಲೂಗಡ್ಡೆ ₹ 20
ಮೂಲಂಗಿ ₹ 30

ಹಣ್ಣಿನ ಧಾರಣೆ   (ಕೆಜಿಗೆ):
ಸೇಬು    ₹ 100 ರಿಂದ 120
ಕಿತ್ತಳೆ    ₹ 60 ರಿಂದ 80
ಮೂಸಂಬಿ  ₹ 80
ದ್ರಾಕ್ಷಿ   ₹ 100
ದಾಳಿಂಬೆ    ₹ 100
ಸಪೋಟ ₹ 60
ಏಲಕ್ಕಿ ಬಾಳೆಹಣ್ಣು ₹ 40 ರಿಂದ 50
ಪಚ್ಚ ಬಾಳೆಹಣ್ಣು ₹ 25 ರಿಂದ 30

ಹೂವಿನ ಧಾರಣೆ

ಚೆಂಡು ಹೂ   ₹ 10
ಮಲ್ಲಿಗೆ   ₹ 30
ಕಾಕಡ ₹ 10
ಕನಕಾಂಬರ ₹ 20
ಗುಲಾಬಿ(ಒಂದಕ್ಕೆ) ₹ 5
ಹೂವಿನ ಹಾರಕ್ಕೆ ₹ 50ರಿಂದ 300

* * 

ಸತತ ಬರಗಾಲದಿಂದ ತೆಂಗಿನ ಮರಗಳು ಒಣಗಿ ಶೇ 40ರಷ್ಟು ಇಳುವರಿ ಕುಸಿತವಾಗಿದೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಇಳುವರಿಯ ವಿಶ್ವಾಸವಿದೆ
ಬಿ.ಎಲ್‌. ಶಿವಪ್ರಸಾದ್‌
ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.