ADVERTISEMENT

ದನದ ಕೊಟ್ಟಿಗೆಯಾಗಿರುವ ಮಂಟಪಗಳು !

ಗೂಳೀಪುರ ನಾ.ಮಂಜು
Published 2 ಅಕ್ಟೋಬರ್ 2013, 6:26 IST
Last Updated 2 ಅಕ್ಟೋಬರ್ 2013, 6:26 IST
ಅಡುಗೆ ತಯಾರಿಸುವ ಸ್ಥಳವನ್ನೇ ತಮ್ಮ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಬೀಡಾಡಿ ದನಗಳು.
ಅಡುಗೆ ತಯಾರಿಸುವ ಸ್ಥಳವನ್ನೇ ತಮ್ಮ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಬೀಡಾಡಿ ದನಗಳು.   

ಯಳಂದೂರು: ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ತ್ಯಾಜ್ಯದಿಂದ ತುಂಬಿರುವ ತೊಟ್ಟಿಗಳು, ಚರಂಡಿಯಲ್ಲಿ ತುಂಬಿ­ರುವ ಹೂಳು, ರಸ್ತೆಯ ಬದಿಯಲ್ಲಿ­ರುವ ಐತಿಹಾಸಿಕ ಮಂಟಪ­ಗಳನ್ನೇ ತಮ್ಮ ಆವಾಸ ಸ್ಥಾನವಾಗಿ ಮಾಡಿ­ಕೊಂಡಿ­ರುವ ಬಿಡಾಡಿ ದನಗಳು...

ಇವು ತಾಲ್ಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿರುವ ರಥದ ಬೀದಿಯ ಪರಿಸ್ಥಿತಿ.  ಅನಾದಿ ಕಾಲ­ದಿಂದ ದೇಗುಲಕ್ಕೆ ಬರುವ ಭಕ್ತರ ದಂಡು ಈ ಬೀದಿಯ ಇಕ್ಕೆಲಗಳಲ್ಲಿ ಇರುವ ಮಂಟಪಗಳಲ್ಲೇ ವಾಸ್ತವ್ಯ ಹೂಡಿ ಇಲ್ಲೇ ಅಡುಗೆ ತಯಾರಿಸಿ ಇದ್ದು ಹೋಗುವ ಪರಿಪಾಠ ರೂಢಿಯಲ್ಲಿದೆ. ಆದರೆ ಈಚಿನ ದಿನಗಳಲ್ಲಿ ಇಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುವುದರಿಂದ ಭಕ್ತರ ದಂಡು ಬಂದು ನೆಲೆಸುತ್ತದೆ. ಆದರೆ ಇವರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಇಲ್ಲಿನ ಸ್ಥಳೀಯ ಆಡಳಿತ ವಿಫಲವಾಗಿದೆ ಎಂಬುದು ಭಕ್ತರಾದ ನಾಗೇಂದ್ರ ರವರ ದೂರು.

ಅಡುಗೆ ಮಾಡುವ ಸ್ಥಳದಲ್ಲೇ ದನಕರುಗಳು ವಾಸ್ತವ್ಯ ಹೂಡುತ್ತದೆ. ಇದರಿಂದ ಬರುವ ಭಕ್ತರಿಗೆ ಕಿರಿಕಿರಿ­ಯಾಗುವುದಲ್ಲದೆ, ಸಗಣಿಯಿಂದ ಈ ಸ್ಥಳ ದುರ್ವಾಸನೆ ಬೀರುತ್ತದೆ. ಇದರ ಜೊತೆಗೆ ಇಲ್ಲಿ ಬೀಸಾಡುವ ತ್ಯಾಜ್ಯಗಳೂ ಸೇರಿಕೊಂಡು ವಿಷಕಾರಿ ಕ್ರಿಮಿಕೀಟ ಜನ್ಯವಾಗುವುದರಿಂದ ಇದು ರೋಗ ಜನ್ಯ ಪ್ರದೇಶವಾಗಿ ಮಾರ್ಪಟ್ಟಿದೆ.

ಇದರ ಜೊತೆಗೆ ಚರಂಡಿಯಲ್ಲಿ ತುಂಬಿರುವ ಹೂಳು ಹಾಗೂ ರಸ್ತೆಯಲ್ಲೇ ಇರುವ ತ್ಯಾಜ್ಯ, ಕಸದ ತೊಟ್ಟಿಯಲ್ಲಿ ವಿಲೇವಾರಿಯಾಗದೆ ಇರುವ ದ್ರವ ಹಾಗೂ ಘನ ತ್ಯಾಜ್ಯಗಳು ಪ್ರಾಣಿಗಳ ಹೊಟ್ಟೆ ಸೇರುವ ಅಪಾಯ­ಇರುವುದರಿಂದ ಸಂಬಂಧಪಟ್ಟ ಪಂಚಾ­ಯತಿ ಈ ಬಗ್ಗೆ ಗಮನ ಹರಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ  ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರಾದ ಸ್ವಾಮಿ, ಹರೀಶ, ನಾಗಮಲ್ಲಪ್ಪ ಸೇರಿದಂತೆ ಹಲವರ ಆಗ್ರಹವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.