ADVERTISEMENT

ದೊಡ್ಡದಾದ ಚಿಕ್ಕ ಅಂಗಡಿ ಬೀದಿ!

ನಗರೋತ್ಥಾನ ಯೋಜನೆಯಡಿ ₹ 2 ಕೋಟಿ ಮೊತ್ತದ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 6:50 IST
Last Updated 9 ಏಪ್ರಿಲ್ 2018, 6:50 IST

ಚಾಮರಾಜನಗರ: ನಗರದ ಪ್ರಮುಖ ವಾಣಿಜ್ಯ ವಹಿವಾಟು ನಡೆ ಯುವ ಸ್ಥಳಗಳೆಂದೇ ಹೆಸರಾದ ಚಿಕ್ಕ ಅಂಗಡಿ ಬೀದಿ ಮತ್ತು ದೊಡ್ಡ ಅಂಗಡಿ ಬೀದಿಗಳಲ್ಲಿ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಇದರಲ್ಲಿ ಚಿಕ್ಕ ಅಂಗಡಿ ಬೀದಿಯ ಕಾಮಗಾರಿಗೆ  ವೇಗ ದೊರೆತಿದ್ದು, ಒಂದರ್ಥದಲ್ಲಿ ಚಿಕ್ಕ ಅಂಗಡಿ ಬೀದಿ ದೊಡ್ಡ ಪೇಟೆ ಬೀದಿಯಾಗುತ್ತಿದೆ.

ಮೈಸೂರು ಮಹಾರಾಜರ ಆಳ್ವಿಕೆಗೆ ಒಳಪಟ್ಟಾಗಿನಿಂದಲೂ ಈ ಬೀದಿಗಳಲ್ಲಿ ವಾಣಿಜ್ಯ ವಹಿವಾಟುಗಳು ನಡೆಯುತ್ತಿದ್ದವು. ಮಹಾರಾಜರಿಗೆ ಸೇರಿದ ಹಲವು ಅಂಗಡಿಗಳೂ ಇಲ್ಲಿ ಇದ್ದವು. ಇಲ್ಲಿನ ಬೀದಿಗಳು ನಗರಕ್ಕೆ ಮಾತ್ರವಲ್ಲ ಇಡೀ ತಾಲ್ಲೂಕಿನ ಹಳ್ಳಿಗಳಿಗೆ ಬೇಕಾದ ವಸ್ತುಗಳ ಪೂರೈಕೆಯ ತಾಣವಾಗಿಯೂ ಇದ್ದವು.

ಅಂದಿನ ಜನಸಂಖ್ಯೆಗೆ ಅನುಗುಣ ವಾಗಿ ಬೀದಿ ಹಾಗೂ ಅಂಗಡಿ ಸಾಲು ಗಳನ್ನು ನಿರ್ಮಿಸಲಾಗಿತ್ತು. ನಂತರ, ನಗರ ವಿಸ್ತರಣೆಯಾಗುತ್ತಿದ್ದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರತೊಡಗಿದರು. ಎತ್ತಿನಗಾಡಿಗಳ ಜಾಗವನ್ನು ಸರಕು ಸಾಗಣೆ ಆಟೊಗಳು ಆಕ್ರಮಿಸಿಕೊಂಡವು. ಪಾದಚಾರಿಗಳಿಗಿಂತ ಹೆಚ್ಚಾಗಿ ದ್ವಿಚಕ್ರ ವಾಹನಗಳು ಸಂಚರಿಸತೊಡಗಿದವು. ಇದರಿಂದ 9 ಮೀಟರ್‌ಗೂ ಕಡಿಮೆ ಅಗಲ ಹೊಂದಿದ್ದ ರಸ್ತೆ ಕಿಷ್ಕಿಂದೆಯಾಗಿ ಮಾರ್ಪಟ್ಟಾಗಿತ್ತು.

ADVERTISEMENT

ಇದನ್ನು ಮನಗಂಡ ನಗರಸಭೆ ನಗರೋತ್ಥಾನ ಯೋಜನೆಯ 2ನೇ ಹಂತದಲ್ಲಿ ಈ ರಸ್ತೆ ಅಭಿವೃದ್ಧಿಗೆ ₹ 2 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿತು. ಸಂತೇಮರಹಳ್ಳಿ ವೃತ್ತದಿಂದ ಚಿಕ್ಕಅಂಗಡಿ ಬೀದಿಯಲ್ಲಿ 475 ಮೀಟರ್‌ವರೆಗೆ ಮೊದಲ ಹಂತದಲ್ಲಿ ಕಾಂಕ್ರೀಟ್ ಹಾಕುವ ಕಾರ್ಯ ಸದ್ಯ ಆರಂಭವಾಗಿದೆ.

ಈ ಬೀದಿಯ ಇತಿಹಾಸದ ಪುಟಗಳನ್ನು ತಿರುವಿದರೆ ಎಲ್ಲೋ ಒಂದೆರಡು ಬಾರಿ ಡಾಂಬರು ಹಾಕಿದ್ದು ಬಿಟ್ಟರೆ ಹೆಚ್ಚಿನ ಕೆಲಸ ನಡೆದಿರಲಿಲ್ಲ. ನಂತರ, ರಸ್ತೆಗೆ ತೇಪೆ ಹಚ್ಚುವ ಕಾರ್ಯ ಮಾತ್ರ ನಡೆಯುತ್ತಿತ್ತು. ಈ ತೇಪೆ ಕಾರ್ಯಕ್ಕಾಗಿಯೇ ಹಲವು ಲಕ್ಷಗಳು ವಿನಿಯೋಗವಾಗುತ್ತಿದ್ದವು. ಇಂತಹ ತೇಪೆ ಕಾರ್ಯ ತಪ್ಪಿಸಲು ಹಾಗೂ ಕಿಷ್ಕೆಂದೆಯಂತಹ ರಸ್ತೆಯನ್ನು ವಿಸ್ತರಿಸಲು ದೂರದೃಷ್ಟಿಯ ಯೋಜನೆ ಯನ್ನು ನಗರಸಭೆ ಹಾಕಿಕೊಂಡಿತು.

ಏನಿದು ಯೋಜನೆ?: ಚಿಕ್ಕ ಅಂಗಡಿ ಬೀದಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವಂತಹ ಕಾಂಕ್ರೀಟ್ ರಸ್ತೆ ಪ್ರತಿ ವರ್ಷ ಮಾಡಲಾಗುತ್ತಿದ್ದ ತೇಪೆ ಹಚ್ಚುವ ಕಾಮಗಾರಿಗಳಂತಹ ಹಣ ಪೋಲಾಗುವ ಕೆಲಸಗಳಿಗೆ ಕಡಿವಾಣ ಹಾಕುವ ನಿರೀಕ್ಷೆ ಇದೆ. 9 ಮೀಟರ್‌ಗೂ ಚಿಕ್ಕದಾದ ರಸ್ತೆ 12  ಮೀಟರ್‌ವರೆಗೂ ವಿಸ್ತರಣೆ ಕಂಡಿದೆ. ಚಿಕ್ಕ ಅಂಗಡಿ ಬೀದಿ ದೊಡ್ಡದಾಗಿದೆ.

ಉಳಿಸಿಕೊಳ್ಳುವುದು ಜನರ ಜವಾಬ್ದಾರಿ

₹ 2 ಕೋಟಿ ವಿನಿಯೋಗಿಸಿ ಚಿಕ್ಕ ಅಂಗಡಿ ಬೀದಿಯನ್ನು ಕಾಂಕ್ರೀಟಿಕರಣಗೊಳಿಸುವ ಕಾಮಗಾರಿ ಮುಗಿದ ಬಳಿಕ ಅದನ್ನು ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ  ನಾಗರಿಕರು ಹಾಗೂ ಇಲ್ಲಿನ ವರ್ತಕರ ಮೇಲಿದೆ. ನಲ್ಲಿ ಸಂಪರ್ಕಕ್ಕೋ, ಕೇಬಲ್‌ ಅಳವಡಿಕೆಗೋ ರಸ್ತೆಯನ್ನು ಅಗೆಯದಂತೆ ಎಚ್ಚರ ವಹಿಸಬೇಕಿದೆ. ಅಗೆಯಲೇ ಬೇಕಾದ ಪ್ರಮೇಯ ಬಂದರೆ ನಗರಸಭೆಯ ಅನುಮತಿ ಪಡೆದು ಮತ್ತೆ ರಸ್ತೆಯನ್ನು ಸುಸ್ಥಿತಿಗೆ ತರಬೇಕಿದೆ ಎಂದು ಇಲ್ಲಿನ ನಿವಾಸಿ ಮಹದೇವಪ್ಪ ಹೇಳುತ್ತಾರೆ.

ಪ್ರತ್ಯೇಕ ಸ್ಥಳ ನಿಗದಿಗೆ ಆಗ್ರಹ

ಬೀದಿಬದಿ ವ್ಯಾಪಾರಸ್ಥರಿಗೆ ಮತ್ತೆ ಇಲ್ಲಿ ಅವಕಾಶ ನೀಡಿದರೆ, ಚಿಕ್ಕ ಅಂಗಡಿ ಬೀದಿ ಮತ್ತೆ ತನ್ನ ಹಳೆಯ ಸ್ವರೂಪ ಪಡೆಯಲಿದೆ ಎಂದು ಹೆಸರು ಹೇಳಲಿಚ್ಛಿಸದ ಇಲ್ಲಿನ ವರ್ತಕರು ಹೇಳುತ್ತಾರೆ. 50ಕ್ಕೂ ಹೆಚ್ಚಿನ ಕೈಗಾಡಿಗಳಲ್ಲಿ  ತರಕಾರಿ  ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರು ಇಲ್ಲಿದ್ದಾರೆ. ಇವರಿಗೆಲ್ಲ ಪ್ರತ್ಯೇಕವಾದ ಸ್ಥಳವನ್ನು ನಗರಸಭೆ ನಿಗದಿ ಮಾಡಬೇಕು. ಆಗ ಅವರ ಬದುಕೂ ಸಾಗುತ್ತದೆ. ರಸ್ತೆಯ ಅಂದವೂ ಹೆಚ್ಚುತ್ತದೆ. ಕೂಡಲೇ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.

**

ಚಿಕ್ಕ ಅಂಗಡಿ ಬೀದಿ ಈಗ ದೊಡ್ಡಪೇಟೆಯ ಸ್ವರೂಪ ತಳೆಯುತ್ತಿದೆ. ಈ ವಿಶಾಲ ರಸ್ತೆಯನ್ನು ಸುಭದ್ರವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ – ಮಹದೇವಪ್ಪ,ಸ್ಥಳೀಯ ನಿವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.