ADVERTISEMENT

ನಗರಕ್ಕೆ ಅಶುದ್ಧ ನೀರು ಪೂರೈಕೆ?

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 8:15 IST
Last Updated 17 ಏಪ್ರಿಲ್ 2012, 8:15 IST

ಚಾಮರಾಜನಗರ: ಜಿಲ್ಲಾ ಕೇಂದ್ರದ ನಾಗರಿಕರಿಗೆ ನಗರಸಭೆ ಆಡಳಿತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದೆಯೇ? ಎಂಬ ಪ್ರಶ್ನೆ ಈಗ ಎದುರಾಗಿದೆ.

ತಾಲ್ಲೂಕಿನ ಮಂಗಲ ಗ್ರಾಮದಲ್ಲಿರುವ ಕುಡಿಯುವ ನೀರು ಪೂರೈಕೆಯ ಶುದ್ಧೀಕರಣ ಘಟಕದ ಒಂದು ಶುದ್ಧೀಕರಣ ಯಂತ್ರ ಕೆಟ್ಟುಹೋಗಿ ಎರಡು ವರ್ಷ ಕಳೆದಿದೆ. ಹೀಗಾಗಿ, ಇರುವ ಒಂದು ಯಂತ್ರದ ಮೂಲಕ ಸಮರ್ಪಕವಾಗಿ ನೀರು ಶುದ್ಧೀಕರಿಸಿ ಪೂರೈಸಲು ಸಾಧ್ಯವೇ? ಎಂಬುದು ನಾಗರಿಕರ ಪ್ರಶ್ನೆ. ಇದಕ್ಕೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿಯಲ್ಲಿ ಉತ್ತರವೇ ಇಲ್ಲ.

ಸೋಮವಾರ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ. ಮಹದೇವು ನೇತೃತ್ವದ ಬರ ಅಧ್ಯಯನ ತಂಡದ ಸದಸ್ಯರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಈ  ಸಂಗತಿ ಬಯಲಾಯಿತು. ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ ಕೂಡ ಪರಿಶೀಲನಾ ತಂಡದಲ್ಲಿದ್ದರು ಎಂಬುದು ವಿಶೇಷ.

ಪ್ರಸ್ತುತ ತಿ. ನರಸೀಪುರದ ಕಾವೇರಿ ನದಿ ಮೂಲದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅಲ್ಲಿಂದ ಪೂರೈಕೆಯಾಗುವ ನೀರನ್ನು ಮಂಗಲದಲ್ಲಿರುವ ಘಟಕದಲ್ಲಿ ಶುದ್ಧೀಕರಿಸಿ ಪೂರೈಕೆ ಮಾಡಬೇಕಿದೆ.

ದುರಂತವೆಂದರೆ ಪ್ರತಿದಿನ ಪೂರೈಕೆಯಾಗುವ ಲಕ್ಷಾಂತರ ಲೀಟರ್ ನೀರನ್ನು ಒಂದು ಯಂತ್ರ ಬಳಸಿ ಪೂರೈಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ನದಿ ಮೂಲದಿಂದ ಪೂರೈಕೆಯಾಗುವ ಕಚ್ಚಾ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಅಶುದ್ಧ ನೀರು ಕುಡಿದು ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂಬುದು ನಾಗರಿಕರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.