ADVERTISEMENT

ನವಜಾತ ಶಿಶುವಿಗೂ ಆಧಾರ್ ಕಾರ್ಡ್ ಅವಶ್ಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 9:40 IST
Last Updated 24 ಸೆಪ್ಟೆಂಬರ್ 2011, 9:40 IST

ಯಳಂದೂರು: `ಮಗು ಹುಟ್ಟಿದ ಮೊದಲ ದಿನಕ್ಕೆ ಆ ಮಗು ಆಧಾರ್ ಕಾರ್ಡ್ ಮಾಡಿಸಲು ಅರ್ಹವಾಗಿ ರುತ್ತದೆ. ಹಾಗಾಗಿ ಮಗುವಿನಿಂದ ಹಿಡಿದು  ವೃದ್ಧರು ಸೇರಿದಂತೆ ಪ್ರತಿಯೊಬ್ಬರೂ ನೋಂದಣಿ ಮಾಡಿಸಿಕೊಬೇಕು~ ಎಂದು ಆಧಾರ್ ತರಬೇತುದಾರ ನಟರಾಜು ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಪಿಡಿಓ, ಕಾರ್ಯದರ್ಶಿ, ಗ್ರಾಮಲೆಕ್ಕಿಗರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಪ್ರತಿಯೊಂದು ಸರ್ಕಾರಿ ಸವಲತ್ತು ಪಡೆದುಕೊಳ್ಳಲು ಅವಶ್ಯಕವಾಗಿರುವುದರಿಂದ ಇದನ್ನು ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಕಾರ್ಡ್ ಮಾಡಿಸಬೇಕಾದರೆ ಪಾಸ್‌ಪೋರ್ಟ್, ಪ್ಯಾನ್‌ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಉದ್ಯೋಗಖಾತ್ರಿ ಚೀಟಿ, ಡಿ.ಎಲ್, ಬಂದೂಕು ಪರವಾನಿಗೆ ಸೇರಿದಂತೆ 17 ಗುರುತಿನ ದಾಖಲೆ ನೀಡಬಹುದಾಗಿದೆ. ಹಾಗೆಯೇ ವಿಳಾಸಕ್ಕೆ 29 ದಾಖಲೆ ನಿಗದಿ ಮಾಡಲಾಗಿದೆ. ಜನನ ದಿನಕ್ಕಾಗಿ ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಎ ದರ್ಜೆ ಪತ್ರಾಂಕಿತ ಅಧಿಕಾರಿಗಳ ಪತ್ರ ಶೀರ್ಷಿಕೆಯಲ್ಲಿ ನೀಡಲ್ಪಟ್ಟ ಜನನ ಪ್ರಮಾಣ ಪತ್ರ ನೀಡಬೇಕಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಈ ಕಾರ್ಡ್ ಬಳಕೆ ಭವಿಷ್ಯದಲ್ಲಿ ಪ್ರತಿಯೊಂದು ಸೌಲಭ್ಯಕ್ಕೂ ಬೇಕಾಗಿರುವುದುರಿಂದ ಅರ್ಜಿ ತುಂಬಬೇಕಾದ ಸಂದರ್ಭದಲ್ಲಿ ತಪ್ಪಾಗದಂತೆ ಜಾಗೃತಿ ವಹಿಸಬೇಕು. ಪದೇ ಪದೇ ಮನನ ಮಾಡಿ ಓದಿ ಅರ್ಜಿ ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.

ಇಒ ಚಿಕ್ಕಲಿಂಗಯ್ಯ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಶೇ.75ರಷ್ಟು ಆಧಾರ್ ಗುರುತಿನ ಕಾರ್ಡ್‌ನ ವಿತರಣೆಯಾಗಿದೆ. ಇದನ್ನು ಸುಲಭವಾಗಿ ವಿತರಿಸಲು ಅಲ್ಲಲ್ಲಿ ಕೇಂದ್ರ ತೆರೆಯುವ ಬಗ್ಗೆ ಚಿಂತಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ತಾ.ಪಂ. ಅಧ್ಯಕ್ಷೆ ಗೌರಮ್ಮ ಮಹದೇವಸ್ವಾಮಿ, ಉಪ ತಹಶೀಲ್ದಾರ್ ನಂಜಯ್ಯ, ಶಿರಸ್ತೇದಾರ್ ನಂಜುಂಡಯ್ಯ, ರಾಜಸ್ವ ನಿರೀಕ್ಷಕ ರಾಜಶೇಖರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.