ADVERTISEMENT

ನಾರಾಯಣಸ್ವಾಮಿ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 4:20 IST
Last Updated 19 ಫೆಬ್ರುವರಿ 2011, 4:20 IST

ಕೊಳ್ಳೇಗಾಲ : ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ನಾರಾಯಣಸ್ವಾಮಿ ದೇವಾಲಯದಲ್ಲಿ ನಾರಾಯಣಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಅಪಾರ ಜನಸ್ತೋಮದ ನಡುವೆ ಲಕ್ಷ್ಮೀ ನಾರಾಯಣ ಸ್ವಾಮಿ ರಥಾರೋಹಣ ನೆರವೇರಿತು. ನಂತರ ರಥದ ಬೀದಿಯಲ್ಲಿ ರಥ ಚಾಲನೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ದಾಸರ ತಂಡ ಹಾಗೂ ನಾಗಸ್ವರ ವಾದನ ಮೇಳದೊಡನೆ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಈ ರಥೋತ್ಸವಕ್ಕೆ ಬೆಂಗಳೂರು, ಮೈಸೂರು, ಕೊಳ್ಳೇಗಾಲ ಪಟ್ಟಣ ಸೇರಿದಂತೆ ವಿವಿದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ರಥ ಚಾಲನೆಗೊಳ್ಳುವ ರಸ್ತೆಯನ್ನು ನಗರಸಭೆ ವತಿಯಿಂದ ಸ್ವಚ್ಛಗೊಳಿಸಿ ನೀರು ಹಾಕಿ ಪ್ರತಿಯೊಂದು ಮನೆಯ ಮುಂಭಾಗದಲ್ಲೂ ರಂಗೋಲಿ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ತಹಶೀಲ್ದಾರ್ ಡಾ.ವೆಂಕಟೇಶ ಮೂರ್ತಿ, ಲಕ್ಷೀ ನಾರಾಯಣಸ್ವಾಮಿ ದೇವಾಲಯದ ಧರ್ಮದರ್ಶಿ ಸು. ಶ್ರೀನಿವಾಸರಾವ್ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಗರಸಭಾ ಅಧ್ಯಕ್ಷೆ ಮಂಗಳಗೌರಿ, ಬೆಂಗಳೂರು ಭಾರತೀಯ ವಿದ್ಯಾಭವನ ಅಧ್ಯಕ್ಷ ಎನ್. ರಾಮಾನುಜಂ, ಮನ್ನಾರ್‌ಕೃಷ್ಣ ಐಯ್ಯಂಗಾರ್, ಡಿವೈಎಸ್‌ಪಿ ಎಚ್.ಆರ್. ಮಹದೇವಯ್ಯ, ನಗರಸಭಾ ಆಯುಕ್ತ ನಾಗಭೂಷಣ್, ಆರೋಗ್ಯ ನಿರೀಕ್ಷಕ ಶಿವಮಾಧು, ಆಂಜನೇಯಸ್ವಾಮಿ ರಾಘವನ್, ಜಿಲ್ಲಾ ಪಂಚಾಯಿತಿ ಸದಸ್ಯ ಮಹದೇವ, ನಗರಸಭಾ ಸದಸ್ಯೆ ಶಕುಂತಲಾ ರಾಜನ್, ನರಸಿಂಹನ್, ವಿ.ಪ್ರಭಾಕರ್ ಐಯ್ಯರ್, ದೇವಾಲಯದ ಪ್ರಧಾನ ಅರ್ಚಕ ಶೇಷಾಭಟ್ಟಾಚಾರ್ಯ ಇದ್ದರು. ಸಬ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಬಂದೋಬಸ್ತ್ ವ್ಯವಸ್ಥೆಮಾಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.