ADVERTISEMENT

ನಾಲ್ಕು ಹೊಸ ಆನೆಗಳ ನಿರೀಕ್ಷೆ

ದಸರಾ ಮಹೋತ್ಸವ–ಆನೆಗಳ ಆಯ್ಕೆ ಸಮಿತಿ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:00 IST
Last Updated 13 ಜುಲೈ 2017, 10:00 IST
ನಾಲ್ಕು ಹೊಸ ಆನೆಗಳ ನಿರೀಕ್ಷೆ
ನಾಲ್ಕು ಹೊಸ ಆನೆಗಳ ನಿರೀಕ್ಷೆ   

ಮೈಸೂರು: ಮುಂಬರುವ ದಸರಾ ಮಹೋತ್ಸವಕ್ಕಾಗಿ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.

ಈ ಬಾರಿ ಹೊಸದಾಗಿ 4 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಇದರಲ್ಲಿ ಕನಿಷ್ಠ 2 ಆನೆಗಳಾದರೂ ಭಾಗವಹಿಸುವುದು ಖಚಿತ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಗುರುವಾರ ಆಯ್ಕೆ ಸಮಿತಿಯ ಸಭೆ ನಡೆಯಲಿದೆ.

ಕಳೆದ ಬಾರಿ 12 ಆನೆಗಳು ಭಾಗವಹಿಸಿದ್ದವು. ಇವುಗಳಲ್ಲಿ ಕೆಲವು ಆನೆಗಳಿಗೆ 45ರಿಂದ 50 ವರ್ಷಗಳಾಗಿವೆ. ವಯಸ್ಸಾಗುತ್ತಿದ್ದಂತೆ ಆನೆಗಳ ಕಾರ್ಯಕ್ಷಮತೆ ಕ್ಷೀಣವಾಗಲಿದೆ. ಇದಕ್ಕೆ ಪರ್ಯಾಯವಾಗಿ ಎರಡನೇ ಪೀಳಿಗೆ ಹಾಗೂ ಮೂರನೇ ಪೀಳಿಗೆಯ ಆನೆಗಳನ್ನು ದಸರಾ ಮಹೋತ್ಸವಕ್ಕೆ ಒಗ್ಗಿಸಬೇಕಿದೆ. ಇದಕ್ಕಾಗಿ ಯೋಜನೆ ಎಣೆದಿರುವ ಅಧಿಕಾರಿಗಳು ಕೃಷ್ಣ, ದ್ರೋಣ, ಧನಂಜಯ, ಈಶ್ವರ ಹಾಗೂ ಅಜಯ ಎಂಬ ಆನೆಗಳ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಮತ್ತಿಗೂಡು ಶಿಬಿರದಲ್ಲಿರುವ ಕೃಷ್ಣ ಆನೆ ಹೆಚ್ಚು ಚುರುಕಾಗಿದೆ. 45 ವರ್ಷದ ಹೊಸ್ತಿಲಲ್ಲಿರುವ ಈ ಆನೆ ಅಭಿಮನ್ಯು ಆನೆಗಿಂತಲೂ ಹೆಚ್ಚು ಕೆಲಸ ಮಾಡುತ್ತಿದೆ. ಈ ಆನೆಗೆ ತರಬೇತಿ ನೀಡಿದರೆ ಭವಿಷ್ಯದಲ್ಲಿ ಅಂಬಾರಿ ಹೊರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಈ ಆನೆಗೆ ಹಸಿರು ನಿಶಾನೆ ದೊರಕುವುದು ನಿಶ್ಚಿತ ಎಂದೇ ಭಾವಿಸಲಾಗಿದೆ.

ಉಳಿದಂತೆ, ಇದೇ ಶಿಬಿರದಲ್ಲಿರುವ ದ್ರೋಣ ಆನೆಯೂ ಪಟ್ಟಿಯಲ್ಲಿದೆ. ಜತೆಗೆ, ದುಬಾರೆ ಶಿಬಿರದಲ್ಲಿರುವ ಅಜೇಯ, ಈಶ್ವರ ಹಾಗೂ ಧನಂಜಯ ಆನೆಗಳೂ ಪರಿಶೀಲನೆಯಲ್ಲಿವೆ.

‘ಸಂಭವನೀಯ ಪಟ್ಟಿಯಲ್ಲಿರುವ ಆನೆಗಳಲ್ಲಿ 14 ಆನೆಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ಕನಿಷ್ಠ 4 ಅಥವಾ 2 ಹೊಸ ಆನೆಗಳನ್ನಾದರೂ ಆಯ್ಕೆ ಮಾಡಿ ಅವುಗಳಿಗೆ ತರಬೇತಿ ನೀಡಲಾಗುವುದು. ಈ ಕುರಿತು ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ, ಪಟ್ಟಿಯನ್ನು ಎಪಿಸಿಸಿಎಫ್‌ಗೆ ಪ್ರಸ್ತಾವ ಸಲ್ಲಿಸಲಾಗುವುದು. ಅವರು ಒಪ್ಪಿಗೆ ನೀಡಿದ ಬಳಿಕವಷ್ಟೇ ಅಂತಿಮ ಪಟ್ಟಿ ಹೊರಬೀಳಲಿದೆ’ ಎಂದು ವನ್ಯಜೀವಿ ವಲಯದ ಡಿಸಿಎಫ್ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.