ಚಿಂತಾಮಣಿ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ತಾಲ್ಲೂಕಿನ ಮುದ್ದುಲಹಳ್ಳಿ ಗ್ರಾಮದ ನೂರಾರು ನಾಗರಿಕರು ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಂದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದುಲಹಳ್ಳಿಯಲ್ಲಿ ಕೆಲ ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅನೇಕ ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದಾಗಲೆಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ ಈವರೆಗೂ ಯಾವುದೇ ಭರವಸೆ ಈಡೇರಿಲ್ಲ. ಗ್ರಾಮದಲ್ಲಿ 2 ನೀರಿನ ಟ್ಯಾಂಕ್‌ಗಳಿವೆ. ಒಂದು ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ. ಹಳ್ಳಿಗರಿಗೆ ನೀರು ಕೊಡುವುದಕ್ಕಿಂತ ಹಣ ಮಾಡುವುದೇ ಅಧಿಕಾರಿಗಳ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ 340 ಕುಟುಂಬಗಳಿದ್ದು, 3200 ಮಂದಿ ಜನಸಂಖ್ಯೆಯಿದೆ. ಜನ ಮತ್ತು ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಪಂಚಾಯಿತಿ ವತಿಯಿಂದ ದಿನಕ್ಕೆ 2 ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಆದರೆ ಈ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಕೆಲವು ದಿನಗಳಿಂದ ಬಡವರು, ಕೂಲಿಕಾರ್ಮಿಕರು, ಕೃಷಿಕರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತ್ಯಜಿಸಿ ನೀರು ತರುವುದನ್ನೇ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.
ಗ್ರಾಮದಿಂದ ಟ್ರಾಕ್ಟರ್‌ಗಳಲ್ಲಿ ಆಗಮಿಸಿದ ಜನರು ಕಚೇರಿಯ ಬಾಗಿಲಿಗೆ ಬೀಗ ಹಾಕಿ ಧರಣಿ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಕಚೇರಿ ಮುಂದೆ ಒಲೆ ಇಟ್ಟು ನೀರು ಕಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಬಿ.ಸಿ.ವಸಂತಕುಮಾರ್ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸೋಮಶೇಖರರೆಡ್ಡಿ, ಕೇಶವರೆಡ್ಡಿ, ಮಲ್ಲಪ್ಪರೆಡ್ಡಿ, ಚಿಕ್ಕಪಾಪಮ್ಮ, ನಾರೆಮ್ಮ, ಶಾಂತಮ್ಮ, ಸುಮಿತ್ರಮ್ಮ, ಕಿಟ್ಟಮ್ಮ, ಲಕ್ಷಮೀದೇವಮ್ಮ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.