ADVERTISEMENT

ಪಂಕ್ತಿ ಸೇವೆಗೆ ಅವಕಾಶ; ಗ್ರಾಮಸ್ಥರ ಆಗ್ರಹ

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಲು ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 6:09 IST
Last Updated 28 ಡಿಸೆಂಬರ್ 2016, 6:09 IST

ಕೊಳ್ಳೇಗಾಲ:  ‘ಜಿಲ್ಲಾಡಳಿತ ನಮ್ಮ ಆಹಾರದ ಹಕ್ಕು ಉಳಿಸಿ ಐದು ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಕೋರಿ ಮನವಿ ಸಲ್ಲಿಸಲು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಮೂರು ದಿನಗಳ ಪಾದಯಾತ್ರೆಗೆ ಭಕ್ತರು ಸಹಕಾರ ನೀಡಬೇಕು ಎಂದು ಹೋರಾಟ ಸಮಿತಿಯ ರಾಜೇಂದ್ರ ಮನವಿ ಮಾಡಿದರು.

ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯ ಚಂದ್ರಮಂಡಲ ಬಳಿ ಸೋಮವಾರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಪಂಕ್ತಿ ಸೇವೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾದಯಾತ್ರೆ ಕುರಿತು ಪೂರ್ವಭಾವಿ ಸಭೆಯಲ್ಲಿ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಪರಂಪರೆಗೆ ಕಳಸ ವಿಟ್ಟಂತೆ ಚಿಕ್ಕಲ್ಲೂರಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಈ ಪರಂಪರೆಯ ಅರಿವಿಲ್ಲದ ಕೆಲವರು 3 ವರ್ಷಗಳಿಂದ ಮಾಂಸಾಹಾರವನ್ನು ಪ್ರಾಣಿಬಲಿ ಎಂದು ತಪ್ಪಾಗಿ ಅರ್ಥೈಸಿ   ಉತ್ಸವದಲ್ಲಿ ಲಕ್ಷಾಂತರ ಭಕ್ತರ ಸಹ ಪಂಕ್ತಿ ಭೋಜನಕ್ಕೆ ಅಡ್ಡಿ ಉಂಟು ಮಾಡಿ ನಮ್ಮ ಆಹಾರದ ಹಕ್ಕಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ತಿಳಿಸಿದರು.

ಈ ವರ್ಷ ಜಿಲ್ಲಾಡಳಿತ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಕಾನೂನಿನ ಚೌಕಟ್ಟಿನೊಳಗೆ ನಮ್ಮ ಆಹಾರದ ಹಕ್ಕು ಉಳಿಸಿಕೊಡುವ ಮೂಲಕ ಐದು ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಕೋರಿ ಮನವಿ ಸಲ್ಲಿಸಲಾಗುವುದು.

ಚಿಕ್ಕಲ್ಲೂರು ಕ್ಷೇತ್ರದಿಂದ ಜ. 2ರಿಂದ ಜ. 4 ವರೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಹೋರಾಟ ಸಮಿತಿ ನಿರ್ಧರಿ ಸಿದೆ. ಈ ಪಾದಯಾತ್ರೆಯಲ್ಲಿ ಸಮಸ್ತ ನೀಲಗಾರರು ಸೇರಿದಂತೆ ಹೆಚ್ಚಿನ ಭಕ್ತರು ಪಾಲ್ಗೊಂಡು ಸಹಪಂಕ್ತಿ ಭೋಜನ ನಮ್ಮ ಧಾರ್ಮಿಕ ಸಂಸ್ಕೃತಿ. ಉರಿ ಕಂಡಾಯ ಕಪ್ಪು ದೂಳ್ತ ನಮ್ಮ ಪರಂಪರೆಯ ಸಂಕೇತ ಎಂಬ ಧ್ಯೇಯ ಘೋಷವಾಕ್ಯವನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಜ. 2ರಂದು ಚಿಕ್ಕಲ್ಲೂರಿನಲ್ಲಿ ಬೆಳಿಗ್ಗೆ 8ಗಂಟೆಗೆ ಪಾದಯಾತ್ರೆಗೆ ಚಾಲನೆ ದೊರೆ ಯಲಿದೆ. ಪಾದಯಾತ್ರೆಗೆ ವ್ಯಾಪಕ ಬೆಂಬಲ ದೊರೆತಿದ್ದು, ಸಾಹಿತಿಗಳು, ಬುದ್ಧಿಜೀವಿಗಳು ಸೇರಿದಂತೆ ಜನಪ್ರತಿ ನಿಧಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಪಾದಯಾತ್ರೆಯು 9.30ಕ್ಕೆ ಕೊತ್ತನೂರು, 10.30ಕ್ಕೆ ಪ್ರಕಾಶ ಪಾಳ್ಯ, 11.30ಕ್ಕೆ ಮತ್ತೀಪುರ, 12ಕ್ಕೆ ಇಕ್ಕಡಹಳ್ಳಿ, 1.30ಕ್ಕೆ ದೊಡ್ಡಿಂದುವಾಡಿ ಇಲ್ಲಿ ಊಟದ ಕಾರ್ಯಕ್ರಮ ಇದೆ. ನಂತರ ಸಂಜೆ. 4.30ಕ್ಕೆ ಮಧುವನಹಳ್ಳಿ, 5.30ಕ್ಕೆ ಸಿದ್ದಯ್ಯನಪುರ, 6ಗಂಟೆಗೆ ಕೊಳ್ಳೇಗಾಲ ಸೇರಲಿದೆ. ನಗರದ ಎಂ.ಜಿ.ಎಸ್‌.ವಿ ಮೈದಾನದಲ್ಲಿ ವಿಚಾರ ಮಂಡನೆ ಮತ್ತು ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.

ಜ. 3ರಂದು ಬೆಳಿಗ್ಗೆ 8ಕ್ಕೆ ಕೊಳ್ಳೇಗಾಲದಿಂದ ಪಾದಯಾತ್ರೆ ಹೊರಟು 8.30ಕ್ಕೆ ಬಾಪುನಗರ, 9.30ಕ್ಕೆ ಮುಡಿಗುಂಡ, 10.30ಕ್ಕೆ ಉತ್ತಂಬಳ್ಳಿ, 11.30ಕ್ಕೆ ಮಾಂಬಳ್ಳಿ, 12ಗಂಟೆಗೆ ಅಗರ, ಮಧ್ಯಾಹ್ನ 1ಗಂಟೆಗೆ ಮದ್ದೂರು, 1.30ಕ್ಕೆ ಯರಿಯೂರು ಇಲ್ಲಿ ಊಟದ ಕಾರ್ಯಕ್ರಮ. 3.30ಕ್ಕೆ ಯಳಂದೂರು, 4.30ಕ್ಕೆ ಕಂದಹಳ್ಳಿ, 5.30ಕ್ಕೆ ಸಂತೇಮರಳ್ಳಿ ಇಲ್ಲಿ ಸಂಜೆ 6ರಿಂದ ವಿಚಾರ ಮಂಡನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ.

ಜ. 4ರಂದು ಬೆಳಿಗ್ಗೆ 9ಕ್ಕೆ ಮಾಂತಾಳ ಪುರ ಗೇಟ್‌, 9.30ಕ್ಕೆ ಕರಡಿಮೋಳೆ, 10.30ಕ್ಕೆ ಮಂಗಲ, 11.30ಕ್ಕೆ ಮಾದಾ ಪುರ, 12.30ಕ್ಕೆ ದೊಡ್ಡರಾಯ ಪೇಟೆ ಗೇಟ್‌, ಊಟ. ಮಧ್ಯಾಹ್ನ 2.30ಕ್ಕೆ ಉಪ್ಪಾರಬೀದಿ, 3ಗಂಟೆಗೆ ಡಿ.ಸಿ ಕಚೇರಿ. ಸಂಜೆ 5ರ ವರೆಗೆ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ವಿವರ ತಿಳಿಸಿದರು.

ಚಿಕ್ಕಲ್ಲೂರು, ತೆಳ್ಳನೂರು, ಕೊತ್ತ ನೂರು, ಸುಂಡ್ರಳ್ಳಿ, ಬಾಣೂರು, ಪ್ರಕಾಶ ಪಾಳ್ಯ, ಮತ್ತೀಪುರ, ಇಕ್ಕಡಹಳ್ಳಿ ಸೇರಿದಂತೆ ಸುತ್ತುಮುತ್ತಲ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಮುಖಂಡರು, ಯಜಮಾನರು ಸಭೆಯಲ್ಲಿ ಇದ್ದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಮುಖಂಡರಾದ ಜಕಾವುಲ್ಲಾ, ಜಗದೀಶ್‌ ಶಂಕನಪುರ, ರವಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.