ADVERTISEMENT

ಪಕ್ಕದಲ್ಲೆ ನದಿ ಇದ್ದರೂ ಬಳಕೆಗೆ ಅಲಭ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 11:45 IST
Last Updated 3 ಫೆಬ್ರುವರಿ 2012, 11:45 IST

ಕೊಳ್ಳೇಗಾಲ: ಗ್ರಾಮದ ಕೂಗಳತೆಯಲ್ಲಿರುವ ಕಾವೇರಿ ನದಿ ನೀರಿನ ಉಪಯೋಗದಿಂದ ಸತ್ತೇಗಾಲ ಜನತೆ ವಂಚಿತರಾಗಿದ್ದಾರೆ.

ತಾಲ್ಲೂಕಿನ ಸತ್ತೇಗಾಲ ಹೊಂದಿಕೊಂಡಂತೆಯೇ ಕಾವೇರಿ ನದಿ ಹರಿಯುತ್ತಿದೆ. ಈ ಗ್ರಾಮದ ಜನರು ಸ್ನಾನ, ಬಟ್ಟೆಬರೆ ತೊಳೆಯುವ, ಜಾನುವಾರುಗಳಿಗೆ ನೀರು ಕುಡಿಸಲು ಈ ನದಿಯನ್ನು ಆಶ್ರಯಿಸಿದ್ದರು.
ಆದರೆ, ಈಗ ಜನತೆ ಇತ್ತಕಡೆ ಮುಖ ಮಾಡದಂತಾಗಿದೆ. ಜನರು ಕಾವೇರಿ ನದಿಗೆ ಇಳಿಯಲು ನಿರ್ಮಿಸಲಾಗಿದ್ದ ಸೋಪಾನಕಟ್ಟೆ ಮತ್ತು ಸ್ನಾನಘಟ್ಟಗಳು ಹಿನ್ನೀರಿನಿಂದ ಮುಳುಗಿ, ನೀರು ಕಲುಷಿತಗೊಂಡಿರುವುದೇ ಮುಖ್ಯ ಕಾರಣ.

ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಿ ಹರಿಯುವ ನೀರನ್ನು ತಡೆದು ಭರೂಕ ಪವರ್ ಕಾರ್ಪೊರೇಷನ್ ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ. ಈ ಘಟಕ ಪ್ರಾರಂಭಿಸದಂತೆ ಪ್ರಾರಂಭದಲ್ಲಿ ಗ್ರಾಮದ ಜನತೆ ಸಾಕಷ್ಟು ಉಗ್ರ ಪ್ರತಿಭಟನೆ ನಡೆಸಿದ್ದರು. ಆ ವೇಳೆಯಲ್ಲಿ ಜನತೆಗೆ ತೊಂದರೆಯಾಗದಂತೆ ಸೋಪಾನಕಟ್ಟೆ, ಸ್ನಾನ ಘಟ್ಟ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.

ಆದರೆ, ಹತ್ತಾರು ವರ್ಷಗಳೇ ಕಳೆದರೂ ಸ್ನಾನಘಟ್ಟ ಮತ್ತು ಸೋಪಾನಕಟ್ಟೆ ನಿರ್ಮಿಸದ ಕಾರಣ ಜನರು ಕಾವೇರಿಯತ್ತ ಮುಖ ಮಾಡದಂತಾಗಿ ತೊಂದರೆಯಲ್ಲಿ ಸಿಲುಕಿದ್ದಾರೆ.ದುಮ್ಮಿಕ್ಕಿ ಸಾಗುತ್ತಿದ್ದ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಿ ಕಾವೇರಿ ನದಿ ಪಾತ್ರದ ದಿಕ್ಕನ್ನೇ ಈ ಭರೂಕ ಕಂಪನಿ ಬದಲಿಸಿದೆ. ಪ್ರಕೃತಿ ಸೌಂದರ್ಯ ಸಂಪೂರ್ಣವಾಗಿ ಹಾಳಾಗಿದೆ. ಕಾವೇರಿ ನದಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯತ್ತ ಸಾಗಿದೆ.

ಈ ಕಟ್ಟೆ ನಿರ್ಮಾಣದಿಂದ ಜಲಪಾತಗಳಲ್ಲಿ ಬೇಸಿಗೆಯಲ್ಲಿ ಜಲಧಾರೆ ಕಣ್ಮರೆಯಾಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಈ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಪ್ರಕೃತಿ ಸಂಪತ್ತು ಉಳಿಸಬೇಕೆಂಬ ಅರಿವು ಮೂಡಿಸಲು ಲಕ್ಷಾಂತರ ಹಣ ಖರ್ಚು ಮಾಡಲು ಮುಂದಾಗಿರುವ ಸರ್ಕಾರಗಳು ಪ್ರಕೃತಿಯನ್ನೇ ಹಾಳುಮಾಡುತ್ತಿರುವ ಇಂತಹ ಕಂಪನಿಗಳಿಗೆ ಅವಕಾಶ ನೀಡಿದ್ದಾದರೂ ಹೇಗೆ?ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ.

ಈ ಸಮಸ್ಯೆ ನಿವಾರಣೆ ಬಗ್ಗೆ ಜನಪ್ರತಿನಿಧಿಗಳೂ ಗಮನಹರಿಸಿಲ್ಲ. ಈಗಲಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಸತ್ತೇಗಾಲ ಜನತೆಗೆ ಕಾವೇರಿ ನದಿ ಉಪಯೋಗ ದೊರೆಯುವಂತೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.