ADVERTISEMENT

ಪ್ರವಾಸಿಗರಿಗೆ ತಟ್ಟಲಿದೆ ಶುಲ್ಕು ಏರಿಕೆ ಬಿಸಿ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನ.1ರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 6:22 IST
Last Updated 26 ಅಕ್ಟೋಬರ್ 2017, 6:22 IST
ಪ್ರವಾಸಿಗರಿಗೆ ತಟ್ಟಲಿದೆ ಶುಲ್ಕು ಏರಿಕೆ ಬಿಸಿ
ಪ್ರವಾಸಿಗರಿಗೆ ತಟ್ಟಲಿದೆ ಶುಲ್ಕು ಏರಿಕೆ ಬಿಸಿ   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ನ.1ರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಪ್ರವೇಶ, ವಾಹನ ನಿಲುಗಡೆ ಶುಲ್ಕ, ವಸತಿ ಗೃಹಗಳ ಬಾಡಿಗೆ ಹೆಚ್ಚಳದ ಬಿಸಿ ತಟ್ಟಲಿದೆ.

ನೂತನ ಆದೇಶದಂತೆ ಸಫಾರಿ ಶುಲ್ಕವನ್ನು ₹ 300 ರಿಂದ ₹550ಕ್ಕೆ , 6ರಿಂದ12 ವರ್ಷದ ಮಕ್ಕಳಿಗೆ ₹150 (ಶೇ 50 ರಿಯಾಯಿತಿ), ವಿದೇಶಿಯರಿಗೆ ₹1100 ರಿಂದ ₹1800ಕ್ಕೆ ಹೆಚ್ಚಿಸಲಾಗಿದೆ.

ದಿನಕ್ಕೆ ₹1000 ಇದ್ದ ಅತಿಥಿ ಗೃಹದ ಬಾಡಿಗೆಯನ್ನು 2500ಕ್ಕೆ, ವಿದೇಶಿಯರಿಗ ₹2000 ದಿಂದ ₹5000ಕ್ಕೆ ಹೆಚ್ಚಿಸಿರುವ ಕುರಿತು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನ್ಯಾಟಿ ಶ್ರೀನಾಥ್ ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

ಒಂದು ಗಂಟೆ ಇದ್ದ ಸಫಾರಿ ಸಮಯವನ್ನು ಒಂದೂವರೆ ಗಂಟೆಗೆ ಹೆಚ್ಚಿಸಲಾಗಿದೆ.

‘ರಾಜ್ಯದಲ್ಲಿರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಹಾಗೂ ಪಕ್ಷಿಧಾಮಗಳ ಪ್ರವೇಶ ಶುಲ್ಕ ನ.1ರಿಂದ ದುಬಾರಿಯಾಗುತ್ತವೆ. ವಿದ್ಯಾರ್ಥಿಗಳಿಗೆ ಮತ್ತು ಅಂಗವಿಕಲರಿಗೆ ನೀಡುತ್ತಿದ್ದ ರಿಯಾಯಿತಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಮೊದಲಿನಂತೆ ಮುಂದುವರೆಯಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ
ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎರಡು ವರ್ಷಗಳಿಂದ ಯಾವುದೇ ಶುಲ್ಕವನ್ನು ಹೆಚ್ಚಳ ಮಾಡಿರಲಿಲ್ಲ. ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವುದು, ಪ್ರವಾಸಿಗರಿಗೆ ಪ್ರವಾಸೋದ್ಯಮ ಮತ್ತು ಕಾಡಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರ ಹಿತವನ್ನು ಕಾಪಾಡಲು ಶುಲ್ಕ ಏರಿಕೆ ಅನಿವಾರ್ಯವಾಗಿದೆ’ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಸಕ್ತ ನಿಗದಿ ಪಡಿಸಿರುವ ಪ್ರವೇಶ ಶುಲ್ಕವೇ ಹೆಚ್ಚಾಗಿದ್ದು, ಇದರಿಂದಾಗಿ ಪ್ರವಾಸಿಗರು ಬಂಡಿಪುರಕ್ಕೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಹೀಗೆ ಶುಲ್ಕವನ್ನು ಹೆಚ್ಚು ಮಾಡುತ್ತಲೆ ಇದ್ದರೆ ಯಾವ ಪ್ರವಾಸಿಗರು ಬರುತ್ತಾರೆ’ ಎಂದು ಪರಿಸರ ಪ್ರೇಮಿಯೊಬ್ಬರ ಪ್ರಶ್ನೆಯಾಗಿದೆ.

ಬಂಡೀಪುರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಕೇವಲ ₹135 ಇದೆ. ಅಲ್ಲಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ನಾಲ್ಕು ಪಟ್ಟು ಹೆಚ್ಚು ಶುಲ್ಕ ಇದೆ. ಅ ರೀತಿ ರಿಯಾಯಿತಿ ದರದಲ್ಲಿ ಪ್ರವಾಸಿಗರನ್ನು ಆಕರ್ಷಣೆ ಮಾಡಬೇಕು ಎಂಬುದು ಪ್ರವಾಸಿಗರಾದ ಮದನ್‌ ಶರ್ಮ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.