ADVERTISEMENT

ಬಡ್ತಿ ಮೀಸಲಾತಿ: ಕಾಯ್ದೆ ತಿದ್ದುಪಡಿ ಮಾಡಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 5:46 IST
Last Updated 23 ಅಕ್ಟೋಬರ್ 2017, 5:46 IST

ಚಾಮರಾಜನಗರ: ಎಸ್‌ಸಿ, ಎಸ್‌ಟಿ ನೌಕರರ ಮುಂಬಡ್ತಿ ರಕ್ಷಿಸಲು ವಿಶೇಷ ಅಧಿವೇಶನ ಕರೆದು ಚರ್ಚಿಸುವಂತೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಆಗ್ರಹಿಸಿದೆ.

ಬಡ್ತಿಯಲ್ಲಿ ಪರಿಶಿಷ್ಟ ಜಾತಿ ನೌಕರರಿಗೆ ಶೇ 15 ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಶೇ 3 ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ 2002ರ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಕೂಡಲೇ ಸರ್ಕಾರ ಅಧಿವೇಶನ ನಡೆಸಿ ಸಾಂದರ್ಭಿಕ ಜೇಷ್ಠತೆಯ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಿ. ಶಿವಶಂಕರ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವಿಶೇಷ ಅಧಿವೇಶನದಲ್ಲಿ ಮೀಸಲಾತಿ ಕ್ಷೇತ್ರದಿಂದ ಚುನಾಯಿತರಾಗಿರುವ ಎಲ್ಲ ಜನಪ್ರತಿನಿಧಿಗಳು ಬಡ್ತಿ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ನೇಮಕಾತಿಯಲ್ಲಿ ನೀಡುತ್ತಿರುವ ಮೀಸಲಾತಿಯನ್ನು ಬಡ್ತಿಗೂ ವಿಸ್ತರಿಸಬೇಕು ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ 5.23 ಲಕ್ಷ ಸರ್ಕಾರಿ ನೌಕರರು ಇದ್ದಾರೆ. ಈ ಪೈಕಿ 1.16 ಲಕ್ಷ ಎಸ್‌ಸಿ, ಎಸ್‌ಟಿ ನೌಕರರಿದ್ದಾರೆ. ಇವರಿಗೆ ಬಡ್ತಿ ಮೀಸಲಾತಿ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಹಿರಿಯ ಐಎಎಸ್‌ ಅಧಿಕಾರಿ ರತ್ನಪ್ರಭ ಅವರು ನೀಡಿರುವ ವರದಿ ಪ್ರಕಾರ, 1984ರಿಂದ 2016ರವರೆಗೆ ಎ, ಬಿ, ಸಿ ದರ್ಜೆಯಲ್ಲಿ ಎಸ್‌ಸಿಗೆ ಶೇ 15 ರಷ್ಟು, ಎಸ್‌ಟಿಗೆ ಶೇ 3ರಷ್ಟು ಮೀಸಲಾತಿ ದೊರೆತಿಲ್ಲ ಎಂದು ತಿಳಿಸಿದರು.

ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಸಂವಿಧಾನದ 117ನೇ ತಿದ್ದುಪಡಿ ವಿಧೇಯಕ ಅಂಗೀಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. 2011ರ ಜನಗಣತಿಯ ಪ್ರಕಾರ ದಲಿತರು 1.5 ಕೋಟಿಯಷ್ಟಿದ್ದಾರೆ. ಇದರ ಆಧಾರದಡಿ ಶೇ 24.1ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೂ ವೇತನ, ಇತರೆ ಭತ್ಯೆಗಳನ್ನು ನೀಡಬೇಕು. 6ನೇ ವೇತನ ಆಯೋಗದ ವರದಿ ಬರುವವರೆಗೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

1894ರಲ್ಲಿ ಬ್ರಿಟಿಷರು ಜಾರಿಗೊಳಿಸಿದ್ದ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಮತ್ತೆ ಅನುಷ್ಠಾನಗೊಳಿಸಬೇಕು. ಹೊಸ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್. ಮೋಹನ್‌, ಜಿಲ್ಲಾ ಘಟಕದ ಉಪಾಧ್ಯಕ್ಷ ಹೇಮಂತ್‌, ನಾಯಕರ ನೌಕರರ ಸಂಘದ ಅಧ್ಯಕ್ಷ ಲಿಂಗರಾಜು, ರಾಜ್ಯ ಪರಿಷತ್‌ ಸದಸ್ಯ ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.