ADVERTISEMENT

ಬರಗಾಲ ಘೋಷಣೆಯಲ್ಲಿ ಅನ್ಯಾಯ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 6:40 IST
Last Updated 7 ಅಕ್ಟೋಬರ್ 2011, 6:40 IST

ಚಿಕ್ಕನಾಯಕನಹಳ್ಳಿ: ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಚಿಕ್ಕನಾಯಕನಹಳ್ಳಿಯನ್ನು ಕೈಬಿಟ್ಟಿರುವ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ತಾಲ್ಲೂಕು ಕೃಷಿಕ ಸಮಾಜ ಖಂಡಿಸಿದೆ.

ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಮುಂಗಾರು ಬೆಳೆಗಳು ಒಣಗಿವೆ. ಮುಂದಿನ ವರ್ಷದ ಬಿತ್ತನೆಗೆ ಹಿಡಿಕಾಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ದನಕರುಗಳ ಮೇವಿಗೂ ಸಂಕಷ್ಟ ಸ್ಥಿತಿ ಒದಗಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ನಟರಾಜು ಹಾಗೂ ಕಾರ್ಯದರ್ಶಿ ಆರ್.ಸಿ.ಮಹೇಶ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಇಂಥ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾದ ಕಾರಣ ಈ ಕ್ಷೇತ್ರ `ಬರಪೀಡಿತ ಪ್ರದೇಶ~ ಘೋಷಣೆಯ ಪಟ್ಟಿಯಿಂದ ಹೊರಗುಳಿದಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ರೈತರ ಆಕ್ಷೇಪ
ತೋವಿನಕೆರೆ: ಕೊರಟಗೆರೆ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸದಿರುವ ಬಗ್ಗೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬರಪೀಡಿತ ಎಂದು ಘೋಷಿಸದಿರುವ ಮುಖ್ಯ ಕಾರಣವೇನು? ಎಂದು ಪ್ರಶ್ನಿಸಿರುವ ರೈತರು ಸುತ್ತಲಿನ ತಾಲ್ಲೂಕುಗಳಾದ ಮಧುಗಿರಿ, ಶಿರಾ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರವು ಅಧಿಕೃತವಾಗಿ ಪ್ರಕಟಿಸಿದೆ. ಈ ತಾಲ್ಲೂಕುಗಳಿಗೆ ಹೊಂದಿಕೊಂಡಿರುವ, ಕೊರಟಗೆರೆ ತಾಲ್ಲೂಕಿನ ರೈತರೂ ಮಳೆಯಿಲ್ಲದೆ ಕಂಗಾಲಾಗಿದ್ದಾರೆ ಎಂದು ದೂರಿದ್ದಾರೆ.

ತಾಲ್ಲೂಕಿನಲ್ಲಿ ತೊಗರಿ, ಮುಸುಕಿನ ಜೋಳ, ಹತ್ತಿ, ಶೇಂಗಾ ನೆಲಕಚ್ಚಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ತಲೆದೋರಿದೆ. ಬೇಸಿಗೆಯನ್ನು ನೆನೆಸಿಕೊಂಡರೇ ಭಯವಾಗುತ್ತದೆ. ಮಳೆ ವೈಪರಿತ್ಯದಿಂದಾಗಿ ಜಮೀನಿಗೆ ಹಾಕಿದ ಬಿತ್ತನೆ ಬೀಜ ಕರಗಿದೆ. ಮಳೆಯ ನಿರೀಕ್ಷೆಯಲ್ಲಿ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು ಸುರಿದ ರೈತರು ಕೈ ಸುಟ್ಟುಕೊಂಡಿದ್ದಾರೆ ಎಂದು ವಿಷಾದಿಸುತ್ತಾರೆ ಹೋಬಳಿಯ ರೈತ ತಿಮ್ಮರಾಯಪ್ಪ.

ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಈ ಕ್ಷೇತ್ರ ಶಾಸಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ನಿಟ್ಟಿನಲ್ಲಿ ತಕ್ಷಣ ಗಮನ ಹರಿಸಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.