ADVERTISEMENT

ಬಸವಾಪುರದಲ್ಲಿ ಅತಿವೃಷ್ಟಿ: ಜನಜೀವನ ಅಸ್ತವ್ಯಸ್ತ

ಮನೆಗಳಿಗೆ ನುಗ್ಗಿದ ನೀರು, 70 ಮನೆ ಕುಸಿತ, ಕೆರೆ ಏರಿ ಒಡೆದು ನೂರಾರು ಎಕರೆ ಫಸಲು ನಷ್ಟ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 8:02 IST
Last Updated 14 ಸೆಪ್ಟೆಂಬರ್ 2013, 8:02 IST
ಯಳಂದೂರು ತಾಲ್ಲೂಕಿನ ಗುರುವಾರ ಸುರಿದ ಮಳೆಗೆ ಪಟ್ಟಣದ ಕುಂಬಾರ ಗುಂಡಿಯ ಜಯಮ್ಮ ಎಂಬುವವರ ಮನೆ ಕುಸಿದಿರುವುದು
ಯಳಂದೂರು ತಾಲ್ಲೂಕಿನ ಗುರುವಾರ ಸುರಿದ ಮಳೆಗೆ ಪಟ್ಟಣದ ಕುಂಬಾರ ಗುಂಡಿಯ ಜಯಮ್ಮ ಎಂಬುವವರ ಮನೆ ಕುಸಿದಿರುವುದು   

ಯಳಂದೂರು: ತಾಲ್ಲೂಕಿನ ಬಸವಾಪುರ ಗ್ರಾಮದಲ್ಲಿ  ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ 70ಕ್ಕೂ ಹೆಚ್ಚು ಮನೆಗಳು ಕುಸಿದವು. ರಸ್ತೆ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿತು.

ಚಿಕ್ಕ ಗ್ರಾಮವಾದ ಬಸವಾಪುರ ಗ್ರಾಮಕ್ಕೆ ಜೋಡಿ ಕೆರೆ ನೀರೂ ಸೇರಿದಂತೆ ಮಳೆ ನೀರು ನುಗ್ಗಿ ಸುಮಾರು 70 ಮನೆಗಳು ಕುಸಿದಿವೆ. 125 ಉಪ್ಪಾರ ಕುಟುಂಬಗಳು ವಾಸ ಮಾಡುವ ಈ ಗ್ರಾಮವು ತಗ್ಗು ಪ್ರದೇಶದಲ್ಲಿದೆ. ಗ್ರಾಮದ ಸುತ್ತಲೂ ನೀರು ಹರಿದಿದ್ದರಿಂದ ಇಲ್ಲಿನ ಮನೆಗಳು ಕುಸಿದಿವೆ. ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ತಾತ್ಕಾಲಿಕವಾಗಿ ಇಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಗ್ರಾಮದ ಶಾಲೆ ಹಾಗೂ ಸಮುದಾಯ ಭವನದಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌, ಸಂಸದ ಆರ್‌. ಧ್ರುವನಾರಾಯಣ, ಶಾಸಕ ಎಸ್‌. ಜಯಣ್ಣ ಶುಕ್ರವಾರ ಭೇಟಿ ನೀಡಿ ನೆರೆ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಪರಿಶೀಲಿಸಿದರು. ಇದೇ  ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಪ್ರಕೃತಿ ವಿಕೋಪ ನಿಧಿಯಿಂದ ನಿರಾಶ್ರಿತರಿಗೆ ತಲಾ 35 ಸಾವಿರ ರೂ.ಗಳ ಚೆಕ್‌ಗಳನ್ನು ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ವರುಣ ಕೃಪೆ ತೋರಿದ್ದಾನೆ. ಆದರೆ ಬಸವಾಪುರ ಗ್ರಾಮದಲ್ಲಿ ಅತಿವೃಷ್ಟಿ ತಲೆ ದೋರಿದೆ. ಈ ಗ್ರಾಮದ ಸುತ್ತ ನೀರು ಸರಾಗವಾಗಿ ಹರಿಯಲು ತೊಂದರೆ ಇದೆ. ಹಾಗಾಗಿ ಇಲ್ಲಿನ ಮನೆಗಳು ಕುಸಿದಿವೆ. ಮುಂದಿನ ದಿನಗಳಲ್ಲಿ ಬಸವ ಆವಾಸ್‌ ಯೋಜನೆಯಡಿಯಲ್ಲಿ ತಲಾ.1.20 ಲಕ್ಷ ರೂ. ವಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಕ್ರಮವಹಿಸಲಾಗುವುದು.

ಗ್ರಾಮದ ಎಲ್ಲಾ 125 ಕುಟುಂಬಗಳಿಗೂ ಇದರಿಂದ ಅನುಕೂಲ­ವಾಗುತ್ತದೆ. ಇದಕ್ಕೆ ಗ್ರಾಮಸ್ಥರ ಒಪ್ಪಿಗೆ ಪಡೆದು ಕ್ರಮ ವಹಿಸಲಾಗುವುದು. ಸದ್ಯಕ್ಕೆ ಗಂಜಿ ಕೇಂದ್ರ ಸ್ಥಾಪಿಸಿ ಮತ್ತೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಗ್ರಾಮಕ್ಕೆ ನೀರು ನುಗ್ಗದಂತೆ ಟ್ರಂಚ್‌ ತಗೆಯಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಗ್ರಾಮಸ್ಥರಿಗೆ ನೆರವಾಗುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಜಿಲ್ಲಾಧಿಕಾರಿ ಕುಂಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ಮೂರ್ತಿ, ತಹಶೀಲ್ದಾರ್‌ ಶಿವರಾಮು, ಉಪ ತಹಶೀಲ್ದಾರ್‌ ನಂಜಯ್ಯ, ಎಇಇ ದೇವರಾಜು, ಸಿಪಿಐ ಕೀರ್ತಿಕುಮಾರ್, ಕಾರ್ಯದರ್ಶಿ ಶಶಿಕಲಾ, ಮುಖಂಡರಾದ ಯರಿಯೂರು ಯೋಗೇಶ್, ಕಂದಹಳ್ಳಿ ಮಹೇಶ್‌, ತೋಂಟೇಶ್‌, ಮಾಂಬಳ್ಳಿ ನಂಜುಂಡಸ್ವಾಮಿ, ಮಹೇಶ್‌, ರವಿ,  ನಿರಂಜನ್‌, ಲಿಂಗರಾಜಮೂರ್ತಿ ಇತರರು ಇದ್ದರು.

ಗ್ರಾಮಕ್ಕೆ ಬಿಎಸ್‌ಪಿ ಮುಖಂಡ ಎನ್‌. ಮಹೇಶ್‌ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು ಗ್ರಾಮವು ತಗ್ಗು ಪ್ರದೇಶದಲ್ಲಿದೆ. ಅನಾದಿ ಕಾಲದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇದಕ್ಕೆ ಶಾಶ್ವತ ನೆಲೆ ಒದಗಿಸ­ಬೇಕು. ಮನೆಗಳನ್ನು ನಿರ್ಮಿಸಿಕೊಳ್ಳಲು 2 ಲಕ್ಷ ರೂ.ಗಳನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಮಾಂಬಳ್ಳಿ ಶಿವಕುಮಾರ್ ಇದ್ದರು.

ಮನೆ ಗೋಡೆ ಕುಸಿತ: ಶಾಸಕ ಭೇಟಿ
ಚಾಮರಾಜನಗರ:
ಜಿಲ್ಲಾ ಕೇಂದ್ರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ನಗರದ ರೈಲ್ವೆ ಬಡಾವಣೆ, ಚೆನ್ನಿಪುರದ ಮೋಳೆ, ಜಾಲಹಳ್ಳಿ ಹುಂಡಿ, ಮೂಡಲಮೋಳೆ, ಕೊಳದಬೀದಿ, ಸಂತೇಮರಹಳ್ಳಿ ವೃತ್ತ ಸೇರಿದಂತೆ ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ತೇಲಿಹೋಗಿದ್ದು, ಜನರು ತೊಂದರೆ ಅನುಭವಿಸಿದರು.

ರಾತ್ರಿಯಿಡಿ ಸುರಿದ ಮಳೆಗೆ ಜನರು ನಿದ್ರಿಸದೆ ಮನೆಯ ಗೋಡೆಗಳು ಬೀಳುವ ಭಯದಲ್ಲಿ ಜಾಗರಣೆ ಮಾಡು­ವಂತಾಯಿತು. ಕೆಲವೆಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಸಂಪಿಗೆ ರಸ್ತೆಯಲ್ಲಿರುವ ಅಕ್ಷಯ್‌ ಆಗ್ರೋ ಏಜೆನ್ಸಿ ಮಳಿಗೆಗೂ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ನಗರಸಭೆಯಿಂದ ಸಮರ್ಪಕವಾಗಿ ಮಳೆನೀರು ಚರಂಡಿ ನಿರ್ಮಿಸದಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಸಂತ್ರಸ್ತರು ಹಿಡಿಶಾಪ ಹಾಕಿದರು.

ಸಂತೇಮರಹಳ್ಳಿ ವೃತ್ತ, ಡಿವಿಯೇಷನ್‌ ರಸ್ತೆಬದಿ­ಯಲ್ಲಿರುವ ಮನೆಗಳ ನಿವಾಸಿಗಳು ಕೂಡ ತೊಂದರೆ ಅನುಭವಿಸಿದರು. ಪ್ರತಿವರ್ಷವೂ ಭಾರೀ ಮಳೆ ಸುರಿದ ವೇಳೆ ಮನೆಗಳಿಗೆ ನೀರು ನುಗ್ಗುತ್ತದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಲು ಹಿಂದೇಟು ಹಾಕಿದ್ದಾರೆ ಎಂದು ಜನರು ದೂರಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಶುಕ್ರವಾರ ಮಳೆ ನೀರು ನುಗ್ಗಿ ಅನಾಹುತ ಸಂಭವಿಸಿದ ಪ್ರದೇಶಗಳಿಗೆ ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈಲ್ವೆ ಬಡಾವಣೆ, ನಾಯಕರ ಬೀದಿ, ಜಾಮಿಯಾ ಮಸೀದಿಯ ಅಕ್ಕಪಕ್ಕದ ಪ್ರದೇಶ ಹಾಗೂ ಕೊಳದ ಬೀದಿಗೆ ಭೇಟಿ ನೀಡಿದರು.

ಮಳೆ ನೀರು ನುಗ್ಗಿ ಹಾನಿಯಾಗಿರುವ  ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಭಾರ ಪೌರಾಯುಕ್ತ ಶ್ರೀಕಂಠಸ್ವಾಮಿ, ತಹಶೀಲ್ದಾರ್ ಮಹದೇವಯ್ಯ, ಮಹೇಶ್, ಶರವಣ, ಮಹದೇವಸ್ವಾಮಿ, ನಗರಸಭೆ ಸದಸ್ಯ ಚಂಗುಮಣಿ, ಕೃಷ್ಣನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.