ADVERTISEMENT

ಬಸ್‌ ನಿರ್ವಾಹಕನ ಕನ್ನಡ ಪ್ರೀತಿ

ಎಲ್ಲರ ಮೆಚ್ಚುಗೆಗೆ ಪಾತ್ರವಾದ ನಟರಾಜು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2017, 6:31 IST
Last Updated 2 ನವೆಂಬರ್ 2017, 6:31 IST
ಪ್ರಯಾಣಿಕರಿಗೆ ಪ್ರಶ್ನೆ ಕೇಳುತ್ತಿರುವ ನಟರಾಜು
ಪ್ರಯಾಣಿಕರಿಗೆ ಪ್ರಶ್ನೆ ಕೇಳುತ್ತಿರುವ ನಟರಾಜು   

ಗುಂಡ್ಲುಪೇಟೆ: ಪಟ್ಟಣದ ರಾಜ್ಯ ಸಾರಿಗೆ ವಿಭಾಗದ ಡಿಪೊದಲ್ಲಿ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿರುವ ಎಂ. ನಟರಾಜು ಅವರ ಕನ್ನಡ ಪ್ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಟರಾಜು ಅವರು 15 ವರ್ಷದಿಂದ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ಸೇವೆಗೆ ಚಾಲಕರಿಂದ ಸಹಕಾರ ಸಿಗುತ್ತಿದೆ.

ಗುಂಡ್ಲುಪೇಟೆಯಿಂದ ದಾವಣಗೆರೆಗೆ ಸಂಚರಿಸುವ ರಾಜ್ಯೋತ್ಸವ ದಿನದಂದು ಬಸ್ಸನ್ನು ವಿಶೇಷವಾಗಿ ಅಲಂಕರಿಸಿ ಕನ್ನಡದ ಪ್ರಮುಖ ಕಾವ್ಯ, ಕೃತಿ, ಕವಿಗಳು, ರಾಜ್ಯದ ಪ್ರಸಿದ್ಧ ಸ್ಥಳಗಳು, ನದಿಗಳು, ಜಿಲ್ಲೆಗಳ ನಕ್ಷೆ ಮತ್ತು ವಿವರಗಳು, ಸಾಹಿತ್ಯ ಸಮ್ಮೇಳದ ಅಧ್ಯಕ್ಷರು, ಜ್ಞಾನಪೀಠ ಪುರಸ್ಕೃತರ ಪಟ್ಟಿಯನ್ನು ಹಾಕಿ ಕನ್ನಡದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾರೆ.

ADVERTISEMENT

ಪ್ರತಿ ರಾಜ್ಯೋತ್ಸವದಂದು ಪ್ರಯಾಣಿಕರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಅವರು, ಈ ಬಾರಿ ‘ಕನ್ನಡ ಅಕ್ಷರಗಳ ಸಂಚಾರ’ ನಡೆಸಿದರು.

(ಬಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕನ್ನಡ ಅಕ್ಷರವಿರುವ ಟೋಪಿಗಳನ್ನು ನೀಡಿರುವುದು)

ಬಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕನ್ನಡದ ಅಕ್ಷರಗಳಿರುವ ಒಂದೊಂದು ಟೋಪಿಯನ್ನು ನೀಡಲಾಯಿತು. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಕನ್ನಡದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ನಟರಾಜು ಅವರು ಚುಟುಕು ಕವಿಯೂ ಹೌದು. ಇವರ ಕನ್ನಡ ಸೇವೆಯನ್ನು ಮೆಚ್ಚಿ ಹಲವು ಸಂಘ ಸಂಸ್ಥೆಗಳು ಅಭಿನಂದಿಸಿವೆ.

‘ರಾಜ್ಯೋತ್ಸವವನ್ನು ವಿನೂತವಾಗಿ ಆಚರಿಸಲು ವೇತನದಲ್ಲಿ ₹ 1,500 ಮೀಸಲಿಡುತ್ತೇನೆ. ಕೆಲವು ದಾನಿಗಳು ನೀಡಿದ ಪುಸ್ತಕಗಳನ್ನು ಸಂಗ್ರಹಿಸಿ, ಪ್ರಶ್ನೆಗೆ ಸರಿ ಉತ್ತರ ನೀಡಿದ ಪ್ರಯಾಣಿಕರಿಗೆ ಉಡುಗೊರೆಯಾಗಿ ನೀಡುತ್ತೇನೆ’ ಎಂದು ನಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಟರಾಜು ಅವರಿಗೆ ಕನ್ನಡವೆಂದರೆ ತುಂಬಾ ಅಭಿಮಾನ. ಅದನ್ನು ತಾವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ನವೆಂಬರ್ ತಿಂಗಳಿಡೀ ಈ ರೀತಿ ಕಾರ್ಯಕ್ರಮ ಮಾಡುತ್ತಾರೆ. ಅವರಿಂದ ಡಿಪೊಗೆ ಉತ್ತಮ ಹೆಸರು ಬಂದಿದೆ. ಇಂತಹ ಕಾರ್ಯವನ್ನು ಎಲ್ಲರು ರೂಢಿಸಿಕೊಂಡರೆ ಕನ್ನಡ ಭಾಷೆ ಬೆಳೆಯುತ್ತದೆ’ ಎಂದು ಗುಂಡ್ಲುಪೇಟೆ ಪಟ್ಟಣದ ಡಿಪೊ ವ್ಯವಸ್ಥಾಪಕ ಜಯಕುಮಾರ್ ತಿಳಿಸಿದರು.

**

ಈ ವರ್ಷ ನನಗೆ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದೆ. ಹಾಗಾಗಿ, ಇದು ಜಿಲ್ಲೆಯಲ್ಲಿ ನಾನು ಆಚರಿಸುತ್ತಿರುವ ಕೊನೆಯ ರಾಜ್ಯೋತ್ಸವ.

ಎಂ. ನಟರಾಜುಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿರ್ವಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.