ADVERTISEMENT

ಭತ್ತಕ್ಕೆ ಇನ್ನೂ ಸಿಗದ ಹಣ: ರೈತರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 9:55 IST
Last Updated 12 ಏಪ್ರಿಲ್ 2012, 9:55 IST

ಯಳಂದೂರು: ಸರ್ಕಾರ ಬೆಂಬಲ ಬೆಲೆಗೆ ಖರೀದಿಸಿರುವ ಭತ್ತ ಖರೀದಿ ಪ್ರಕ್ರಿಯೆ ನಡೆದು 3 ತಿಂಗಳಾದರೂ ಇನ್ನೂ ಹಣ ನೀಡದಿರುವುದನ್ನು ಖಂಡಿಸಿ ತಾಲ್ಲೂಕಿನ ರೈತರು ಬುಧವಾರ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ತಾಲ್ಲೂಕಿನ ರೈತರಿಂದ ಭತ್ತ ಖರೀದಿ ಮಾಡಲಾಗಿದೆ. ಆದರೆ, ಇದರಲ್ಲಿ ಇನ್ನೂ 1.10 ಕೋಟಿ ರೂ ಬಾಕಿ ಇದೆ. ರೈತರು ಕಳೆದ ಜೂನ್‌ನಿಂದಲೇ ಭತ್ತ ಬೆಳೆಯಲು ಸಾಲ ಮಾಡಿದ್ದಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಎಂಬ ಆಸೆಯಿಂದ ಮಾರಾಟ ಮಾಡಿದ್ದಾರೆ. ಆದರೆ, ಇದುವರೆವಿಗೂ ಹಣ ಪಾವತಿಯಾಗಿರದ ಕಾರಣ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಮೇಲಾಧಿಕಾರಿಗಳು ಭತ್ತವನ್ನು ಪರೀಕ್ಷೆ ಮಾಡಬೇಕು ಎನ್ನುವ ನೆಪ ಹೇಳುತ್ತಿದ್ದಾರೆ. ಈ ಸ್ಥಿತಿ ಮುಂದು ವರಿದರೆ ಸಾವಿರಾರು ಟನ್ ನೀಡಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಆರೋಪಿಸಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿ ಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಯಿತು. ಆಹಾರ ಮತ್ತು ನಾಗರಿಕರ ಸರಬರಾಜು ನಿಗಮದ ವ್ಯವಸ್ಥಾಪಕ ಬಸವರಾಜು, ಸಹಾಯಕ ಅಧಿಕಾರಿ ಶಿವಲಿಂಗಮೂರ್ತಿ ಅವರನ್ನು ಕಚೇರಿ ಯಲ್ಲಿ ದಿಗ್ಭಂಧನ ಹಾಕಿದರು. ರೈತರ ವಿರುದ್ಧ ಬೇಜವಾಬ್ಧಾರಿತನದಿಂದ ವರ್ತಿಸಿದ ಅಧಿಕಾರಿಗಳು ಕ್ಷಮೆಯಾ ಚಿಸಬೇಕೆಂದು ಪಟ್ಟು ಹಿಡಿದರು.

ಶಾಸಕ ಭರವಸೆ: ಸ್ಥಳಕ್ಕೆ ಸ್ಥಳೀಯ ಶಾಸಕ ಜಿ.ಎನ್. ನಂಜುಂಡಸ್ವಾಮಿ ಭೇಟಿ ನೀಡಿ ಅಧಿಕಾರಿಗಳು ಇದುವರೆಗೂ ವರದಿ ನೀಡಲು ವಿಳಂಬ ಮಾಡಿದ್ದಾರೆ. ಹಾಗಾಗಿ ರೈತರ ಹಣ ನೀಡಿಕೆಯಲ್ಲಿ ವಿಳಂಬವಾಗಿದೆ.

ಈ ಬಗ್ಗೆ ಬೆಂಗಳೂರಿಗೆ ತೆರಳಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ವಾರ ದೊಳಗೆ ರೈತರ ಹಣವನ್ನು ಪಾವತಿ ಮಾಡಿಸುವ ಬರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಹೊನ್ನೂರು ಪ್ರಕಾಶ್, ರಂಗಸ್ವಾಮಿ, ಕೆಸ್ತೂರು ನಟರಾಜು, ಪ್ರಭುಪ್ರಸಾದ್, ಬಿ.ಪಿ. ನಾಗೇಂದ್ರಸ್ವಾಮಿ, ಮೆಳ್ಳಹಳ್ಳಿ ನಾಗರಾಜು, ಸಿದ್ದಲಿಂಗಸ್ವಾಮಿ, ಕೆ.ಸಿ. ಬಸವಣ್ಣ, ಪುಟ್ಟಮಲ್ಲಪ್ಪ, ಜಗದೀಶ್, ಕೃಷ್ಣಪ್ಪ, ಆನಂದರಾಜು, ತಹಶೀಲ್ದಾರ್ ಶಿವನಾಗಯ್ಯ, ಪ್ರಭಾರ ಸಿಇಒ ಶಂಕರರಾಜು, ಇಒ ಚಿಕ್ಕಲಿಂಗಯ್ಯ ಸಬ್‌ಇನ್ಸ್‌ಪೆಕ್ಟರ್ ಮಹಾದೇವನಾಯಕ ಇತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.