ADVERTISEMENT

ಮನೆಯ ಬಾಗಿಲಲ್ಲೇ ನಿಂತ ಕಾವೇರಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:25 IST
Last Updated 10 ಅಕ್ಟೋಬರ್ 2012, 8:25 IST
ಮನೆಯ ಬಾಗಿಲಲ್ಲೇ ನಿಂತ ಕಾವೇರಿ
ಮನೆಯ ಬಾಗಿಲಲ್ಲೇ ನಿಂತ ಕಾವೇರಿ   

ಚಾಮರಾಜನಗರ: ಗಡಿ ಭಾಗದಲ್ಲಿಯೇ ಕಾವೇರಿ ನದಿ ಹರಿದರೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ.

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಗ್ರಾಮೀಣರು ನೀರಿಗಾಗಿ ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಒಂದರ್ಥದಲ್ಲಿ ಸಮುದ್ರದ ನೆಂಟಸ್ತನ; ಉಪ್ಪಿಗೆ ಬಡತನ ಎನ್ನುವಂತಾಗಿದೆ.

ಜಿಲ್ಲೆಯಲ್ಲಿರುವ ಗ್ರಾಮಗಳ ಸಂಖ್ಯೆ 830. ಚಾಮರಾಜನಗರ- 251, ಗುಂಡ್ಲುಪೇಟೆ- 188, ಕೊಳ್ಳೇಗಾಲ- 341 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 50 ಗ್ರಾಮಗಳಿವೆ. ಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್ ಇಲಾಖೆಯು ತಯಾರಿಸಿರುವ ವರದಿ ಅನ್ವಯ ಇವುಗಳಲ್ಲಿ ಪ್ರತಿವರ್ಷವೂ ಸುಮಾರು 350 ಗ್ರಾಮಗಳು ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುತ್ತವೆ.

ಕೊಳ್ಳೇಗಾಲ ತಾಲ್ಲೂಕಿನ ಹನೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬರಗಿ, ಹಂಗಳ, ಬೇಗೂರು ಹೋಬಳಿಯಲ್ಲೂ ಸಮಸ್ಯೆ ತಾರಕಕ್ಕೇರಿದೆ.

ಚಾಮರಾಜನಗರ ತಾಲ್ಲೂಕಿನ ಹರವೆ, ಸಂತೇಮರಹಳ್ಳಿ ಹೋಬಳಿಯೂ ಇದರಿಂದ ಹೊರತಲ್ಲ. ಈ ಭಾಗಗಳಲ್ಲಿ ಕನಿಷ್ಠ 600ರಿಂದ 700 ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ಲಭಿಸುವುದು ಅಪರೂಪ. ಆದರೆ, ಈ ಗ್ರಾಮಗಳಿಗೆ ಶಾಶ್ವತ ಪರಿಹಾರವೇ ಸಿಕ್ಕಿಲ್ಲ.

ಗ್ರಾಮೀಣರ ಒತ್ತಾಯದ ಫಲವಾಗಿ ಕಬಿನಿ ನದಿ ಮೂಲದಿಂದ ಚಾಮರಾಜನಗರ ತಾಲ್ಲೂಕಿನ 166 ಹಳ್ಳಿ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಕೊಂಚ ಸಮಾಧಾನ ಮೂಡಿಸಿದೆ. ಒಟ್ಟು 261.05 ಕೋಟಿ ರೂ ವೆಚ್ಚದ ಈ  ನೀರು ಪೂರೈಕೆ ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಆದರೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ಭಾಗದ ಜನರಿಗೆ ಈ ಭಾಗ್ಯ ಲಭಿಸಿಲ್ಲ. ಜಿಲ್ಲೆಯ ಗಡಿ ಭಾಗದಲ್ಲಿ ಕಾವೇರಿ ನದಿ ಒಟ್ಟು 110 ಕಿ.ಮೀ. ಹರಿಯುತ್ತದೆ. ಬಹುತೇಕವಾಗಿ ಕೊಳ್ಳೇಗಾಲ ಭಾಗದಲ್ಲಿಯೇ ಹರಿಯುವುದು ವಿಶೇಷ. ಆದರೂ, ನದಿಯ ಅಂಚಿನಲ್ಲಿರುವ ಈ ತಾಲ್ಲೂಕಿನ 260ಕ್ಕೂ ಹೆಚ್ಚು ಹಳ್ಳಿಯ ಜನರಿಗೆ ಇಂದಿಗೂ ಕಾವೇರಿ ನೀರು ಕುಡಿಯುವ ಅದೃಷ್ಟ ಲಭಿಸಿಲ್ಲ. ನೀರು ಪೂರೈಕೆಗೆ ಆಗ್ರಹಿಸಿಯೇ ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಸ್ಥಳೀಯ ಚುನಾವಣೆಯನ್ನು ಬಹಿಷ್ಕರಿಸಿದ್ದ ನಿದರ್ಶನವೂ ಇದೆ.

ಯಳಂದೂರು ತಾಲ್ಲೂಕು ಕೂಡ ಇದರಿಂದ ಹೊರತಲ್ಲ. ಈ ತಾಲ್ಲೂಕಿನ 45 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

ಯೋಜನೆ ವಿಳಂಬ
ಕೊಳ್ಳೇಗಾಲ ತಾಲ್ಲೂಕಿನ 260 ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತದಿಂದ 200 ಕೋಟಿ ರೂ ಮೊತ್ತದ ಯೋಜನೆ ತಯಾರಿಸಲಾಗಿದೆ. ಜತೆಗೆ, ಯಳಂದೂರು ತಾಲ್ಲೂಕಿನ 45 ಗ್ರಾಮಗಳಿಗೆ ನೀರು ಪೂರೈಸಲು 50 ಕೋಟಿ ರೂ ಮೊತ್ತದ ಯೋಜನೆ  ಸಿದ್ಧಪಡಿಸಲಾಗಿದೆ.

ಪ್ರತಿವರ್ಷವೂ ಈ ಅಂದಾಜುಪಟ್ಟಿಯನ್ನು ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆದಿದೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಮನೆಯ ಬಾಗಿಲಿನಲ್ಲಿಯೇ ಹರಿದರೂ `ಕಾವೇರಿ~ ಮನೆಯೊಳಗೆ ಬರುವುದಿಲ್ಲ ಎನ್ನುವುದು ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣರ ಅಳಲು.

`ಈ ವರ್ಷವೂ ಬರಗಾಲ ಎದುರಿಸುವಂತಾಯಿತು. ಈಗ ಮಳೆ ಸುರಿದರೂ ಪ್ರಯೋಜನವಿಲ್ಲ. ಕೊಳ್ಳೇಗಾಲ ತಾಲ್ಲೂಕಿನ ಶೇ. 80ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನವೇ ನಡೆದಿಲ್ಲ.

ಕಾವೇರಿ ನದಿ ಗಡಿಯಲ್ಲಿಯೇ ಹರಿದರೂ ನೀರು ಕುಡಿಯಲು ನಮಗೆ ಅದೃಷ್ಟ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು~ ಎಂದು ಒತ್ತಾಯಿಸುತ್ತಾರೆ ಕೊಳ್ಳೇಗಾಲದ ಶಿವಪ್ಪ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT