ADVERTISEMENT

ಮಲಿನವಾಗುತ್ತಿದೆ ರಂಗನಾಥ ಕೆರೆ

ಸ್ವಚ್ಛತೆಗೆ ಒತ್ತು ನೀಡಲು ಪರಿಸರ ಪ್ರೇಮಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 8:22 IST
Last Updated 16 ನವೆಂಬರ್ 2017, 8:22 IST
ಮಲಿನವಾಗುತ್ತಿದೆ ರಂಗನಾಥ ಕೆರೆ
ಮಲಿನವಾಗುತ್ತಿದೆ ರಂಗನಾಥ ಕೆರೆ   

ಕೊಳ್ಳೇಗಾಲ: ಪಟ್ಟಣದ ಪ್ರಾಚೀನ ರಂಗನಾಥನ ಕೆರೆಯು ಮಲಿನಗೊಳ್ಳುತ್ತಿದ್ದು, ಇದರಿಂದಾಗಿ ಕೆರೆಯ ವೈಶಿಷ್ಟ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಯು ಕೊಳ್ಳೇಗಾಲ ಪಟ್ಟಣದಿಂದ ಸಿದ್ದಯ್ಯನಪುರ ಗ್ರಾಮದವರೆಗೂ, ಸುಮಾರು 88.74 ಎಕರೆಯಲ್ಲಿ ಹರಡಿಕೊಂಡಿದೆ. ಇದರ ನೀರು ಕೆಲವು ಭಾಗದ ಜಮೀನುಗಳಿಗೆ ಹಾಗೂ ದನಕರುಗಳಿಗೆ ಕುಡಿಯಲು ಉಪಯೋಗವಾಗಿದೆ. ಅನೇಕ ಜಲಚರಗಳು ಇಲ್ಲಿ ಆಶ್ರಯ ಪಡೆದಿವೆ. ಅಲ್ಲದೇ, ಕೆರೆಯಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ.

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ತುಂಬಿ ತುಳುಕುತ್ತಿದೆ. ಆದರೆ, ಅನೈರ್ಮಲ್ಯ ತಾಂಡವವಾಡುತ್ತಿದೆ.

ADVERTISEMENT

ಅಕ್ಕಪಕ್ಕದ ಮನೆಯ ಕೊಳಚೆ ನೀರು, ತ್ಯಾಜ್ಯವನ್ನು ಕೆರೆಗೆ ಎಸೆಯಲಾಗುತ್ತಿದೆ. ಇದರಿಂದಾಗಿ ನೀರಿನ ಬಣ್ಣವೇ ಬದಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿನ ನ್ಯಾಯಾಲಯದ ಮುಂಭಾಗವಿರುವ ಹೋಟೆಲ್‌, ಟೀ ಅಂಗಡಿಯವರು ಪಾತ್ರೆ ತೊಳೆದ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ಉಳಿದ ಪದಾರ್ಥಗಳನ್ನು ಕೆರೆಗೆ ಹಾಕುವ ಮೂಲಕ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಇಲ್ಲಿನ ಪರಿಸರ, ಕೆರೆಯ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು ಎಂದು ಪರಿಸರ ಪ್ರೇಮಿ ಎನ್‌.ದಿಲೀಪ್‌ ಒತ್ತಾಯಿಸಿದ್ದಾರೆ.

***

2011 ಮತ್ತು 12 ರಲ್ಲಿ ಕೆರೆಯ ಹೂಳನ್ನು ಎತ್ತಿಸಿದ್ದೇವೆ. ನೀರು ಖಾಲಿ ಆದ ತಕ್ಷಣ ಹೂಳೆತ್ತಿ ಕೆರೆಯನ್ನು ಸ್ವಚ್ಛಮಾಡುತ್ತೆವೆ. ನಂತರ, ಕೆರೆ ಗಲೀಜು ಮಾಡುವವರ ವಿರುದ್ಧ ಕ್ರಮಜರುಗಿಸುತ್ತೇವೆ
ರಾಮಕೃಷ್ಣ , ಸಹಾಯಕ ಎಂಜಿನಿಯರ್

***
ಈಗಾಗಲೇ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಅದು ಮುಗಿದ ತಕ್ಷಣ ಯಾವುದೇ ಕೊಳಚೆ ನೀರು ಕೆರೆಗೆ ಹರಿಯದಂತೆ ಕ್ರಮವಹಿಸಿ, ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ
ಶಾಂತರಾಜು ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.