ADVERTISEMENT

ಮಲೆನಾಡನ್ನು ಬಾಧಿಸುತ್ತಿರುವ ಒತ್ತುವರಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 10:19 IST
Last Updated 25 ಸೆಪ್ಟೆಂಬರ್ 2013, 10:19 IST

ನರಸಿಂಹರಾಜಪುರ : ಜಿಲ್ಲೆಯಲ್ಲಿ ಪ್ರಮುಖ ಮಲೆನಾಡಿನ ಭಾಗವಾದ ತಾಲ್ಲೂಕು ಕೇಂದ್ರದಲ್ಲಿ ಒತ್ತುವರಿ ಸಮಸ್ಯೆ ಎಂಬುದು ರೈತರು ಹಾಗೂ ಜನಸಾಮಾನ್ಯರನ್ನು ಬಾಧಿಸುತ್ತಿದೆ.

ಪ್ರಮುಖವಾಗಿ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ದಾಖಲೆ ಪ್ರಕಾರ ಎಲ್ಲಾ ರೀತಿಯ ಭೂಮಿ ಸೇರಿ ಒಟ್ಟು 91,484 ಎಕರೆ 18 ಗುಂಟೆಯಿದೆ. ಇದರಲ್ಲಿ  ಹಿಡುವಳಿ  15,350 ಎಕರೆ ಇದೆ. ಚಿಕ್ಕಗ್ರಹಾರ ಅರಣ್ಯ ವಲಯದಲ್ಲಿ 44 ಸಾವಿರ ಎಕರೆ ಅರಣ್ಯ ಭೂಮಿ ಇದ್ದು ಇದರಲ್ಲಿ  2084 ಕುಟುಂಬಗಳು 4554 ಎಕರೆ ಒತ್ತುವರಿಯಾಗಿದೆ. ಎನ್‌.ಆರ್.ಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 14,500 ಹೆಕ್ಟೇರ್  ಅರಣ್ಯ ಪ್ರದೇಶವಿದ್ದು ಇದರಲ್ಲಿ  895 ಕುಟುಂಬಗಳು 1164 ಹೆಕ್ಟೇರ್ ಒತ್ತುವರಿ ಮಾಡಿವೆ.

ಇಲ್ಲಿನ ಒತ್ತುವರಿ ಸಮಸ್ಯೆಯನ್ನು ಕೆದಕುತ್ತಾ ಹೋದಂತೆ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತದೆ. ಮೂಲತಃ ಈ ಭಾಗದಲ್ಲಿ ಒತ್ತುವರಿ ಸಮಸ್ಯೆ ಉದ್ಭವಿಸಲು ಸರ್ಕಾರವೇ ನೇರ ಕಾರಣ ಎಂಬ ಆರೋಪಗಳು ವ್ಯಾಪಾಕವಾಗಿ ಕೇಳಿಬರುತ್ತಿವೆ. ಹಿಂದೆ ಕಾಫಿ ಕಂಪನಿ ಬೆಳೆಯಾಗಿತ್ತು. ಅಲ್ಲದೆ ಅಂತರ ರಾಷ್ಟ್ರೀಯ ಮಾರುಕಟ್ಟೆ ಹೊಂದಿತ್ತು. ಈ ಬೆಳೆಯನ್ನು ಬೆಳೆಯಲು ಸರ್ಕಾರ ಅರಣ್ಯ ಭೂಮಿಯನ್ನ ಗುತ್ತಿಗೆ ಆಧಾರದ ಮೇಲೆ ನೀಡುತ್ತಿತ್ತು. ಕಾಲ ನಂತರ  ಆ ಭೂಮಿ ಗುತ್ತಿಗೆದಾರರಿಗೆ ಕಾಯಂ ಭೂಮಿಯಾಯಿತು. ಜನಸಂಖ್ಯೆ ಬೆಳೆಯುತ್ತಾ ಹೋದಂತೆ  ಜನ ಸಾಮಾನ್ಯರು ಬದುಕಿಗಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡರು. ಯಾವಾಗ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಲಭ್ಯವಾಗಲಿಲ್ಲವೂ ಜನ ಸಾಮಾನ್ಯರ ಒತ್ತುವರಿ ಮೇಲೆ ಸರ್ಕಾರದ ಕಣ್ಣು ಬಿತ್ತು  ಆಗ ಒತ್ತುವರಿ ಸಮಸ್ಯೆ ಉಲ್ಬಣಗೊಂಡಿತು.

ಭದ್ರಾ ಅಣೆಕಟ್ಟೆ  ನಿರ್ಮಾಣ ವಾದಾಗ  ಸಾವಿರಾರು ಮೂಲ ನಿವಾಸಿಗಳು ನಿರಾಶ್ರಿತರಾದರು. ಕೆಲವರಿಗೆ ಬೇರೆ ಪ್ರದೇಶದಲ್ಲಿ ಪುನರ್ವಸತಿ ಸೌಲಭ್ಯ ಒದಗಿಸಿತು. ಆದರೆ ಸಾಕಷ್ಟು ಜನ ತಾಲ್ಲೂಕಿನ ವ್ಯಾಪ್ತಿಯಲ್ಲಿ ಉಳಿದು ಕೊಂಡು ಲಭ್ಯವಾದ ಪ್ರದೇಶದಲ್ಲಿಯೇ ಕೃಷಿ ಮಾಡಿಕೊಂಡು ಜೀವನ ಪ್ರಾರಂಭಿ ಸಿದರು. ಕೆಲವರಿಗೆ ಕಾನೂನು ಬದ್ಧ ವಾಗಿ ಜಮೀನು ಮಂಜೂ ರಾಯಿತು.

ಇನ್ನೂ ಕೆಲವರು ಕಾಲನಂತರದಲ್ಲಿ ಜಾರಿಗೆ ಬಂದ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅರಣ್ಯ ಇಲಾಖೆ ಒಪ್ಪಿಗೆ ಯೊಂದಿಗೆ ಕಾಯಂ ಸಾಗುವಳಿ ಪತ್ರ ಪಡೆದರು. ಜನಪ್ರತಿನಿಧಿಗಳು ಮತದ ಆಸೆಗಾಗಿ  ಮೂಲ ನಿವಾಸಿಗಳನ್ನು ಕಡೆಗಣಿಸಿ ಅನಿವಾಸಿಯರಿಗೆ ಒತ್ತುವರಿಗೆ ಪ್ರೋತ್ಸಾಹಿಸಿದರು. ಅಲ್ಲದೆ ಅವರಿಗೆ ಕಾಯಂ ಸಾಗುವಳಿ ಪತ್ರವನ್ನು ಪಡೆಯುವಂತೆ ಮಾಡಿದರು ಎಂಬ ಆರೋಪವೂ ಇದೆ.

ಆದರೆ ಅರ್ಹ ಫಲಾನುಭವಿಗಳಿಗೆ  ಕಾಯಂ ಸಾಗುವಳಿ ಪತ್ರವೇ ಸಿಗಲಿಲ್ಲ. ಈ ನಡುವೆ ಒತ್ತುವರಿ ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚೆತ್ತು ಕೊಂಡ ಅರಣ್ಯ ಇಲಾಖೆ  ಪುರಾತನ ದಾಖಲೆಗಳನ್ನು ಹುಡುಕಿ ಕಂದಾಯ ಇಲಾಖೆಗೆ ನೀಡಿ ಹಿಂದೆ  ಕಂದಾಯ ಭೂಮಿ ಇದ್ದುದ್ದನ್ನು ಇದಕ್ಕಿಂತ ಅರಣ್ಯ ಪ್ರದೇಶ ಎಂದು ಘೋಷಿಸಿತು. ನೂರಾರು ವರ್ಷದಿಂದ ಭೂಮಿ ಉಳುಮೆ ಮಾಡಿ ಕೊಂಡು ಬಂದಿದ್ದ ಜನರಿಗೆ ಇದು ಅಘಾತವನ್ನುಂಟು ಮಾಡಿತು. ಅರಣ್ಯ ಇಲಾಖೆಯ ಬಳಿ ಲಭ್ಯವಿರುವ ದಾಖಲೆಗಳು ಸಹ ಸಾಕಷ್ಟು ಲೋಪ ದೋಷಗಳಿದ್ದು ಇದನ್ನು ಪರಿಶೀಲಿಸುವ ಗೋಜಿಗೆ ಕಂದಾಯ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಪ್ರಯತ್ನಿಸದಿ ರುವುದು ಸಮಸ್ಯೆ ಉಲ್ಬಣಕ್ಕೆ ಕಾರಣ ಎನ್ನುತ್ತಾರೆ ಒತ್ತುವರಿದಾರರು.

2006ರಲ್ಲಿ ಕೇಂದ್ರ ಸರ್ಕಾರ ಮೂಲ ನಿವಾಸಿಗಳನ್ನು ರಕ್ಷಿಸಲು ಅರಣ್ಯ ಹಕ್ಕು ಕಾಯಿದೆ ಜಾರಿಗೆ ತಂದಿತು, ಆದರೆ ಇದನ್ನು ಪರಿಶಿಷ್ಟ ಪಂಗಡದವರಿಗೆ ಮಾತ್ರ ಅನ್ವಯಿಸಿತು. ಇದರಿಂದಾಗಿ ಮೂರು ತಲೆಮಾರಿನಿಂದಲೂ ವಾಸವಾಗಿದ್ದ ಜನರು ವಂಚಿತವಾಗು ವಂತಾಯಿತು.

ಇದನ್ನು ಎಲ್ಲಾ ವರ್ಗದ ಜನರಿಗೆ ಅನ್ವಯಿಸಿ ಜಾರಿಗೆ ತಂದಿದ್ದರೆ ಮೂಲ ನಿವಾಸಿಗಳಿಗೆ ಅನುಕೂಲವಾ ಗುತ್ತಿತ್ತು. ಆದರೆ ಅರಣ್ಯ ಇಲಾಖೆ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಅರಣ್ಯ ಒತ್ತುವರಿದಾರರೆಂದು ಗುರುತಿಸಿರು ವುದು ದುರಂತವೇ ಸರಿ.
ಈ ನಡುವೆ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಹುಲಿ ಯೋಜನೆ, ಆನೆ ಕಾರಿಡಾರ್ ಮುಂತಾದ ಯೋಜನೆ ಗಳು ಸಾಕಷ್ಟು ಒತ್ತುವರಿದಾರರ ನಿದ್ದೆ ಕೆಡಿಸಿದೆ.

ಲಭ್ಯವಿರುವ ಮಾಹಿತಿ ಪ್ರಕಾರ ಮಲೆನಾಡಿನ ಇತರೆ ತಾಲ್ಲೂಕಿಗೆ ಹೋಲಿಸಿದಾಗ ಎನ್,ಆರ್.ಪುರ ತಾಲ್ಲೂಕು ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶವೆಲ್ಲವೂ ಮಹಾರಾಜರ ಕಾಲದಲ್ಲಿ ನೋಟಿಫಿಕೇಷನ್ ಅಗಿರುವ ಅರಣ್ಯವಾಗಿದ್ದು,  ಒತ್ತುವರಿದಾರರು ಒಂದಲ್ಲ ಒಂದು ದಿನ ಒತ್ತುವರಿ ತೆರವು ಗೊಳಿಸುವ ಅನಿವಾರ್ಯತೆ ಇದೆ.

ಸರ್ಕಾರಿ ಮತ್ತು ಅರಣ್ಯ ಒತ್ತುವರಿ ದಾರರ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದು ಕೊಳ್ಳುವ ತೀರ್ಮಾನವೇ ಸಮಸ್ಯೆಗೆ ಪರಿಹಾರ ವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.