ಯಳಂದೂರು: ಎಲ್ಲೆಂದರಲ್ಲಿ ಬೀಸಾಡಿರುವ ತ್ಯಾಜ್ಯ, ರಸ್ತೆಯಲ್ಲೇ ಹರಿಯುವ ಚರಂಡಿ ನೀರು, ಗ್ರಾಮ ಪಂಚಾಯಿತಿ ಕಚೇರಿಗೆ ತೆರಳುವ ರಸ್ತೆಯಲ್ಲೇ ಬಿದ್ದಿರುವ ಕಸದ ರಾಶಿ, ಕೆಟ್ಟು ನಿಂತಿರುವ ಕೈಪಂಪು, ಚರಂಡಿಯಲ್ಲೇ ನಿಂತಿರುವ ಕಲುಷಿತ ನೀರು, ಉರಿಯದ ಬೀದಿ ದೀಪಗಳು....
ಇದು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಮಾಂಬಳ್ಳಿ ಗ್ರಾಮದ ಸ್ಥಿತಿ.
ಗ್ರಾಮಕ್ಕೆ ಪ್ರತ್ಯೇಕ ಪಂಚಾಯಿತಿ ಇದ್ದರೂ, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ಸೋತಿದೆ ಎಂಬುದು ಇಲ್ಲಿನ ನಾಗರಿಕರ ದೂರು. ಗ್ರಾಮದ ಮುಸ್ಲಿಂ ಜನಾಂಗ ವಾಸವಾಗಿರುವ ಬಡಾವಣೆಗಳಲ್ಲಿ ಹೆಚ್ಚಾಗಿ ರೇಷ್ಮೆ ನೂಲನ್ನು ತೆಗೆಯುತ್ತಾರೆ. ಹಾಗಾಗಿ ಇಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿರುವ ಪಂಚಾಯಿತಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿನ ಬಹುತೇಕ ಚರಂಡಿಗಳಲ್ಲಿ ಕಲುಷಿತ ನೀರು ಮಡುಗಟ್ಟಿ ನಿಂತಿದೆ. ಈ ಬಡಾವಣೆಯಲ್ಲಿ ಈಗಾಗಲೇ ಡೆಂಗೆ ಜ್ವರದಿಂದ ಅನೇಕರು ಬಳಲಿರುವ ಉದಾಹರಣೆಗಳೂ ಇವೆ. ಇದರ ಜೊತೆಗೆ ಇಲ್ಲಿನ ರಸ್ತೆಗಳಲ್ಲೂ ಮಾರುದ್ದದ ಹಳ್ಳಗಳು ಬಿದ್ದಿದ್ದು ಮಳೆಗಾಲದಲ್ಲಿ ಸಂಚಾರಕ್ಕೆ ತೊಡಕಾಗುತ್ತದೆ. ಕೆಲವು ಬೀದಿಗಳಲ್ಲಿ ಇನ್ನೂ ಚರಂಡಿ ನಿರ್ಮಾಣವಾಗದ ಕಾರಣ ರಸ್ತೆಯಲ್ಲೇ ಕಲುಷಿತ ನೀರು ಹರಿಯುತ್ತದೆ ಎಂಬುದು ಸ್ಥಳೀಯ ನಿವಾಸಿಗಳಾದ ಅಸ್ಲಂ, ಅಲ್ತಾಫ್ ಸೇರಿದಂತೆ ಹಲವರ ದೂರು.
ಇಲ್ಲಿ ಅನೇಕ ಕೈಪಂಪುಗಳು ಕೆಟ್ಟು ನಿಂತಿದ್ದು ಇವುಗಳ ದುರಸ್ತಿಯಾಗಿಲ್ಲ. ಕೆಲವು ಸಂದರ್ಭಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯಿಗೆ ತೆರಳುವ ರಸ್ತೆಯಲ್ಲೇ ಕಸದ ರಾಶಿ ಬಿದ್ದಿದೆ. ಆಗಾಗ ಇದಕ್ಕೆ ಬೆಂಕಿಯನ್ನು ಹಾಕುವುದರಿಂದ ವಿಷಯುಕ್ತ ಅನಿಲ ವಾತಾವರಣ ಹರಡುತ್ತದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದ್ದು ಇಲ್ಲಿನ ಮಕ್ಕಳ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದರ ಜೊತೆಗೆ ವಿದ್ಯುತ್ ದೀಪಗಳೂ ಸರಿಯಾಗಿ ಉರಿಯುವುದಿಲ್ಲ. ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವಂತೆ ಅನೇಕ ಬಾರಿ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಕ್ರಮ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ವಹಿಸುವರೇ ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.