ಚಾಮರಾಜನಗರ: ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಗೆ ಮೀಸಲಾದ ಸೌಲಭ್ಯ ಪಡೆಯುತ್ತಿದ್ದು, ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸೋಮವಾರ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಸಾವಿರಾರು ವರ್ಷದಿಂದ ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿಗಳಿಗೆ ಸರ್ಕಾರ ಮೀಸಲಾತಿ ಸೌಲಭ್ಯ ನೀಡಿದೆ.
ಬೇಡ ಜಂಗಮರು ಹಾಗೂ ಬುಡ್ಗ ಜಂಗಮರು ಪರಿಶಿಷ್ಟ ಜಾತಿಯ ಒಂದು ಪಂಗಡವಾಗಿದ್ದಾರೆ. ಮೂಲತಃ ಆಂಧ್ರದವರಾದ ಇವರನ್ನು ಮಾಲ ಜಂಗಮರು, ಮಾದಿಗ ಜಂಗಮರು ಎಂದು ಕರೆಯಲಾಗುತ್ತಿದೆ. ಆದರೆ, ವೀರಶೈವ ಲಿಂಗಾಯತ ಜಂಗಮರು ಸಾಮಾಜಿಕ ಹಾಗೂ ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದ್ದು, ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ದೂರಿದರು.
1981ರ ಜನಗಣತಿ ವೇಳೆ ರಾಜ್ಯದಲ್ಲಿ ಬೇಡ ಜಂಗಮರ ಸಂಖ್ಯೆ 3,035ರಷ್ಟಿತ್ತು. ಆದರೆ, ವೀರಶೈವ ಲಿಂಗಾಯತ ಜಂಗಮರು ತಾವು ಬೇಡ ಜಂಗಮರೆಂದು ಬರೆಯಿಸಿದ ಪರಿಣಾಮ ಹತ್ತು ವರ್ಷದಲ್ಲಿ ಈ ಸಂಖ್ಯೆ 27,994ಕ್ಕೆ ಏರಿತು. 2001ರ ಜನಗಣತಿಯಲ್ಲಿ 54,873ಕ್ಕೆ ತಲುಪಿದೆ ಎಂದರು.ವೀರಶೈವ ಲಿಂಗಾಯತ ಜಂಗಮರ ಹೋರಾಟಕ್ಕೆ ಕೆಲವು ಮಠಗಳು ಬೆಂಬಲ ನೀಡುತ್ತಿವೆ. ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಪಾಲಿಸುತ್ತಿವೆ. ಕೂಡಲೇ, ವೀರಶೈವ ಲಿಂಗಾಯತ ಜಂಗಮರಿಗೆ ನೀಡಿರುವ ಮೀಸಲಾತಿ ಸೌಲಭ್ಯ ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯ ವ್ಯಾಪಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಸಂಘಟನಾ ಸಂಚಾಲಕ ವಿ. ಕೃಷ್ಣರಾಜು, ಜಿಲ್ಲಾ ಸಂಚಾಲಕ ಸಂಘಸೇನ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂದು ವಿಶ್ವ ಮಹಿಳಾ ದಿನಾಚರಣೆ
ಚಾಮರಾಜನಗರ: ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಾ.8ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ನಗರಸಭೆ ಮಾಜಿ ಅಧ್ಯಕ್ಷೆ ಚಿನ್ನಮ್ಮ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಕ್ರೀಡಾಪಟು ಬಿ.ಸಿ. ಪಾರ್ವತಿ ಅವರನ್ನು ಸನ್ಮಾನಿಸಲಾಗುವುದು. ಪ್ರಾಂಶುಪಾಲರಾದ ಪ್ರೊ.ಎಂ.ಡಿ. ಪುಷ್ಪಾವತಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ. ಸದಸ್ಯೆ ಜಿ. ನಾಗಶ್ರೀ, ಪ್ರೊ.ಎ.ಜಿ. ಶಿವಕುಮಾರ್, ಡಾ.ಚೌಡಯ್ಯ ಕಟ್ನವಾಡಿ, ಪ್ರೊ.ಎಸ್. ಶಂಕರಪ್ಪ, ಪಿ. ಕಾಂಚನಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.