ADVERTISEMENT

ಮುಂದುವರಿದ ಹುಲಿ ಸೆರೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 5:58 IST
Last Updated 2 ಜನವರಿ 2014, 5:58 IST

ಗುಂಡ್ಲುಪೇಟೆ: ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆ ಬುಧವಾರವೂ ವಿಫಲವಾಗಿದ್ದು, ಅರಣ್ಯದಂಚಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ವಲಯದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಗಜಪಡೆಗಳು ಮತ್ತು ಅರಣ್ಯ ಸಿಬ್ಬಂದಿ ತೀವ್ರ ಶೋಧ ನಡೆಸಿದರೂ ಹುಲಿಯ ಯಾವುದೇ ಚಲನವಲನ ಪತ್ತೆಯಾಗಲಿಲ್ಲ. ಆದರೆ, ಸಂಜೆ ವೇಳೆಗೆ ಹುಲಿ ಸೆರೆಗೆ ಇಟ್ಟಿದ್ದ ಬೋನಿನ ಬಳಿ ಹುಲಿಯೊಂದು ಸುಳಿದಾಡಿರುವುದು ಪತ್ತೆಯಾಯಿತು.

ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರದ ಸಹ ಕಾರ್ಯದರ್ಶಿ ರಾಜೇಶ್‌ ಗೋಪಾಲ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸನ್‌ ವಹಿಸಿದ್ದರು. ಗುರುವಾರ ಕೂಡಾ ಕಾರ್ಯಾಚರಣೆ ಮುಂದುವರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದು, ಹುಲಿಯನ್ನು ಪತ್ತೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯುವಿಗೆ ವಿಶ್ರಾಂತಿ: ಬುಧವಾರ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಭಾಗವಹಿಸದಿದ್ದರೂ ಕಾಲಿಗೆ ಉಂಟಾಗಿರುವ ಗಾಯದಿಂದ ಬಳಲುತ್ತಿರುವ ಆನೆ ಅಭಿಮನ್ಯುಗೆ ಗುರುವಾರ ವಿಶ್ರಾಂತಿ ನೀಡಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಮಧ್ಯಾಹ್ನದವರೆಗೂ ಉತ್ಸಾಹದಿಂದ ಇದ್ದ ಅಭಿಮನ್ಯು ಸಂಜೆಯ ವೇಳೆಗೆ ಶಿಬಿರಕ್ಕೆ ಹಿಂತಿರುಗುವ ಸಮಯದಲ್ಲಿ ಕಾಲೆಳೆಯುತ್ತಾ ಸಾಗಿ ಬಂದದ್ದು ಆತನಿಗಿರುವ ನೋವಿನ ತೀವ್ರತೆ ತೋರಿಸುತ್ತಿತ್ತು.

ಗ್ರಾಮಸ್ಥರಿಂದ ಪ್ರತಿಭಟನೆ ಇಂದು: ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅರಣ್ಯದಂಚಿನ ಗ್ರಾಮಸ್ಥರಾದ ಕೆ.ಟಿ. ಕುಮಾರ್‌, ಮಹದೇವಪ್ಪ ಇತರರು, ಅರಣ್ಯ ಇಲಾಖೆ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಅರಣ್ಯದಂಚಿನ ಗ್ರಾಮಸ್ಥರೆಲ್ಲ ಸೇರಿ ಗುರುವಾರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.