ADVERTISEMENT

ಮೇವು ವಿತರಣೆಯಲ್ಲಿ ತಾರತಮ್ಯ: ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 7:50 IST
Last Updated 20 ಏಪ್ರಿಲ್ 2012, 7:50 IST

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದ್ದರೂ ಸರ್ಕಾರ ಬರ ಪರಿಹಾರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಂ.ಮಹದೇವ್ ಗುರುವಾರ ಆರೋಪಿಸಿದರು.

ತಾಲ್ಲೂಕಿನ ಕೋಡಹಳ್ಳಿ, ಶಿವಪುರ, ಬೊಮ್ಮಲಾಪುರ, ಕೊಡಸೋಗೆ, ಕಬ್ಬಹಳ್ಳಿ ಹಾಗೂ ಹೊರೆಯಾಲ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಿಸಿದ ನಂತರ ಮಾತನಾಡಿದರು.

ತಾಲ್ಲೂಕಿನ ಬರಗಿ ಫಾರಂನಲ್ಲಿ 110 ಟನ್ ಮೇವು ಸಂಗ್ರಹಣೆಯಾಗಿದ್ದರೂ ಅದನ್ನು ವಿತರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿದ್ದರೂ ಬವಣೆ ನೀಗಿಸಲು ಮುಂದಾಗಿಲ್ಲ. ಜಾನುವಾರುಗಳಿಗೆ ಮೇವು ವಿತರಿಸಲೂ ಸಹ ರಾಜಕೀಯ ಮಾಡುತ್ತಿದ್ದು, ಇದು ಕಾಂಗ್ರೆಸ್ ಜಾನುವಾರು ಮತ್ತು ಇದು ಬಿಜೆಪಿ ಜಾನುವಾರು ಎಂದು ವಿಂಗಡಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ಮುಖ್ಯಮಂತ್ರಿ ಗಾದಿಗಾಗಿ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಕಳೆದ 4 ತಿಂಗಳಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬರ ವೀಕ್ಷಣೆಗೆ ಬರುವ ಅಧಿಕಾರಿಗಳು ಕೇವಲ ನೆಪ ಮಾತ್ರಕ್ಕೆ ಬಂದು ಹೋಗುತ್ತಿದ್ದಾರೆಯೇ ಹೊರತು ನಿಜವಾದ ಪರಿಹಾರ ಕಾರ್ಯ ನಡೆಯುತ್ತಿಲ್ಲ ಎಂದು ಹೇಳಿದರು.

ಪ್ರತಿ ತಾಲ್ಲೂಕಿಗೆ ಕೇವಲ 15 ಲಕ್ಷ ರೂ.ಗಳನ್ನು ಮೇವು ಖರೀದಿಗೆ ನೀಡಿದ್ದಾರೆ. ಆದರೆ ಇದು ವಾಸ್ತವವಾಗಿ ಸಾಲುವುದಿಲ್ಲ. ಬ್ಯಾಂಕ್‌ಗಳವರು ತೀವ್ರತರವಾದ ಬರಗಾಲದ ನಡುವೆಯೂ ಸಾಲ ವಸೂಲಾತಿ ಮಾಡುತ್ತಿದ್ದಾರೆ.

ಇದು ಕೂಡಲೇ ನಿಲ್ಲಬೇಕು ಮತ್ತು ವಶಪಡಿಸಿಕೊಂಡಿರುವ ಟ್ರಾಕ್ಟರ್‌ಗಳನ್ನು ಮತ್ತೆ ರೈತರಿಗೆ ನೀಡಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೊಮ್ಮಲಾಪುರ ಕೆರೆ ಕಾಮಗಾರಿಗಾಗಿ 50 ಲಕ್ಷ ಹಣ ಬಿಡುಗಡೆಯಾಗಿದ್ದರೂ ಸಮರ್ಪಕವಾಗಿ ಕೆಲಸ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಸರ್ಕಾರ ಕೆರೆಗಳ ಪುನರುಜ್ಜೀವನ ಕಾರ್ಯಕ್ಕಾಗಿ ಬಿಡುಗಡೆಯಾಗಿರುವ ಕೋಟ್ಯಂತರ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬೀಳಲಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಜನತಾದಳ (ಎಸ್) ಅಧ್ಯಕ್ಷ ಪಂಚಾಕ್ಷರಿ, ಮಾಜಿ ಶಾಸಕ                   ಎಸ್.ಬಾಲರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೂಡ್ನಾಕೂಡು ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಹೊರೆಯಾಲ ಮಹೇಶ್, ಟೌನ್ ಘಟಕದ ಅಧ್ಯಕ್ಷ ಹರೀಶ್‌ಗೌಡ, ಉಪಾಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಮಹಾದೇವನಾಯಕ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಹೊರೆಯಾಲ ಮಹೇಶ್ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.