ADVERTISEMENT

ರಂಗಪ್ಪನ ದೊಡ್ಡಜಾತ್ರೆಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:01 IST
Last Updated 26 ಏಪ್ರಿಲ್ 2013, 9:01 IST

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಗುರುವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಬಿಳಿಗಿರಿರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ನಂತರ ರಥದ ಮೇಲೆ ಬಿಜಂಗಯ್ಯಲಾಯಿತು.

ಮಧ್ಯಾಹ್ನ 11.15ಕ್ಕೆ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಆಗಸದಲ್ಲಿ ಕಾಣಿಸಿಕೊಂಡ ಗರುಡ ರಥವನ್ನು ಸುತ್ತು ಹಾಕಿ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಬಿಸಿಲನ್ನು ಲೆಕ್ಕಿಸದೆ ಸೇರಿದ್ದ ಸಾವಿರಾರು ಭಕ್ತರು ಹರ್ಷೋದ್ಘಾರದೊಂದಿಗೆ ತೇರು ಎಳೆದು ಪುನೀತರಾದರು.

ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕುಡಿಯುವ ನೀರಿಗೆ ವಿಶೇಷ ಟ್ಯಾಂಕರ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥದ ಬೀದಿಯಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿತ್ತು. ಪರ್ಯಾಯವಾಗಿ ರೇಷ್ಮೆ ಇಲಾಖೆಯ ಸ್ಥಳದಲ್ಲಿ ಅಡುಗೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಯಳಂದೂರಿನಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಖಾಸಗಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಡಿವಾಣ ಹಾಕಿದ್ದರಿಂದ ಇದರ ಬಳಕೆ ಕಡಿಮೆ ಇತ್ತು.

ರಥದ ಗಾಲಿಗೆ ಕಾಯಕಲ್ಪ, ಭಕ್ತರ ಕೃತಜ್ಞತೆ:
ಕಳೆದ ವರ್ಷ ರಥದ ಗಾಲಿ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಬ್ರಹ್ಮರಥೋತ್ಸವ ನಿಲ್ಲಿಸಲಾಗಿತ್ತು. ಈ ಬಾರಿಯೂ ಅದೇ ಭೀತಿ ಎದುರಾಗಿತ್ತು. ಆದರೆ ಈ ಹಿಂದೆ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಅವರ ಕಾಳಜಿ ಫಲವಾಗಿ ಶಿಥಿಲ ರಥವನ್ನು ದುರಸ್ತಿ ಪಡಿಸಿದ್ದರಿಂದ ಈ ಬಾರಿ ರಥೋತ್ಸವ ನಡೆಯಿತು.

ಜಿಲ್ಲಾಧಿಕಾರಿ ಸಾವಿತ್ರಿ, ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಾಣಿಬಲಿ ನಿಷೇಧ
ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿ ಜಾತ್ರೆಯ ದಿನ ಹಾಗೂ ಮಾರನೇ ದಿನ ನಡೆಯುವ ಪ್ರಾಣಿ ಬಲಿ ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋವಂಶ ರಕ್ಷಾದಳದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

ಗುರುವಾರ ನಡೆದ ರಥೋತ್ಸವದಲ್ಲಿ ಪ್ರಾಣಿಬಲಿ ಕುರಿತು ಜಾಗೃತಿ ಜಾಥಾ ನಡೆಸಿದ ನಂತರ ಅವರು ಮಾತನಾಡಿದರು. ಪ್ರಾಣಿ ಬಲಿ ಕಾನೂನು ಬಾಹಿರವಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಬಿಳಿಗಿರಿರಂಗನಬೆಟ್ಟವು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾದ್ದರಿಂದ ಇಲ್ಲಿ ಪ್ರಾಣಿ ಬಲಿ ನಡೆಯಲೇ ಬಾರದು. ಸಾರ್ವಜನಿಕರು ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳ ಕಾಲ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶ ಇದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ಯಳಂದೂರು ಪಟ್ಟಣದ ಬಸ್‌ನಿಲ್ದಾಣ, ಚೆಕ್‌ಪೂಸ್ಟ್ ಹಾಗೂ ಬಿಳಿಗಿರಿರಂಗನಬೆಟ್ಟದ ರಥದ ಬೀದಿಯಲ್ಲಿ `ಅಹಿಂಸಾ ಪ್ರಾಣಿದಯಾ ಸಂದೇಶ ರ‌್ಯಾಲಿ' ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.