ADVERTISEMENT

ರಸ್ತೆ ಸಂಚಾರ: ಎಚ್ಚರ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:35 IST
Last Updated 7 ಜನವರಿ 2012, 6:35 IST

ಯಳಂದೂರು: ಪ್ರಸಕ್ತ ದಿನಗಳಲ್ಲಿ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದು ತ್ರಾಸದಾಯಕವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಎಂದು ಡಿವೈಎಸ್‌ಪಿ ಮಹಾದೇವಯ್ಯ ತಿಳಿಸಿದರು.

ಶುಕ್ರವಾರ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ     ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಹನ ದಟ್ಟಣೆ ಹೆಚ್ಚಾದಂತೆ ಪಾದಚಾರಿಗಳು ಹಾಗೂ ವಾಹನ ಸವಾರರ ಮೈಯೆಲ್ಲಾ ಕಣ್ಣಾಗಿ ಚಲಿಸಬೇಕು. ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ರಸ್ತೆಯ ಬದಿಯಲ್ಲೇ ಸಂಚರಿಸಬೇಕು. ವಾಹನಗಳನ್ನು ವೇಗವಾಗಿ ಓಡಿಸಬಾರದು. ನಿಮಯಬಾಹಿರವಾಗಿ ವಾಹನಗಳ ಚಾಲನೆ ಮಾಡಿದರೆ ಶಿಕ್ಷೆಯ ಜೊತೆ ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚಾಗುವುದರಿಂದ ನಿಯಮಗಳ ಕಡೆ ಗಮನಹರಿಸಬೇಕು ಎಂದರು.

ಸರ್ಕಲ್ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್. ಸಬ್  ಇನ್ಸ್‌ಪೆಕ್ಟರ್ ಚಿಕ್ಕರಾಜುಶೆಟ್ಟಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮನಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಚಂದ್ರಕುಮಾರ್, ಶಿಕ್ಷಕರಾದ ನಾಗೇಶ್, ಗುರುಸಿದ್ಧು, ಜಯರಾಂ, ಕೃಷ್ಣ, ಮುರುಳೀಧರ್ ಇತರರು ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.