ಚಾಮರಾಜನಗರ: `ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 2004ರಲ್ಲಿ ನಡೆದ ಚುನಾವಣೆಯು ಐತಿಹಾಸಿಕ ಫಲಿತಾಂಶ ನೀಡಿತು. ಅದರ ಫಲವಾಗಿ ಕಳೆದ ಹತ್ತು ವರ್ಷದಿಂದ ರಾಜಕೀಯ ವನವಾಸ ಅನುಭವಿಸುತ್ತಿದ್ದೇನೆ. ಈ ವನವಾಸಕ್ಕೆ ಮತದಾರರು ಮುಕ್ತಿ ನೀಡಬೇಕು' ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಕೋರಿದರು.
ನಗರದ ಗುರುನಂಜಶೆಟ್ಟಿ ಛತ್ರದ ಮುಂಭಾಗ ಬುಧವಾರ ನಡೆದ ಬಿಜೆಪಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನನ್ನ ರಾಜಕೀಯ ಭವಿಷ್ಯ ಅಡಗಿದೆ. ದಿ.ಬಿ. ರಾಚಯ್ಯ ಅವರು ರೈತ ಕುಟುಂಬಗಳಿಗೆ ನೆರವಾಗಿದ್ದರು. ಜನಸೇವೆಯಲ್ಲಿ ತೊಡಗಿದ್ದರು. ಅವರ ಮಗನಾದ ನಾನು ಶಾಸಕನಾಗಿದ್ದ ವೇಳೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸ್ದ್ದಿದೇನೆ. ನನ್ನ ಮೇಲೆ ಕರುಣೆ ತೋರಬೇಕು ಎಂದರು.
ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ಕಾಮಗಾರಿಗಳಿಗೆ ಈಗಿನ ಕಾಂಗ್ರೆಸ್ ಜನಪ್ರತಿನಿಧಿಗಳು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಬೆಂಗಳೂರು-ಚಾಮರಾಜನಗರ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಧ್ರುವನಾರಾಯಣ ಕೇವಲ ರೈಲು ಬಿಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ಯುಪಿಎ ಸರ್ಕಾರ ಹಗರಣಗಳ ಗೂಡಾಗಿದೆ. ಈ ಎಲ್ಲ ಕಾರಣಗಳಿಂದ ಜನರು ಬದಲಾವಣೆ ಬಯಸಿದ್ದಾರೆ ಎಂದ ಅವರು, ನನಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿ, `ಹಣದುಬ್ಬರ, ರಾಜಕೀಯ ಅರಾಜಕತೆ, ಗಡಿಯಲ್ಲಿ ಭಾರತೀಯ ಸೈನಿಕರ ಸಾವಿನ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ. ದೇಶದ ರಕ್ಷಣೆ ಮಾಡಲು ವೈಫಲ್ಯ ಕಂಡಿದೆ. ಗಡಿಯಲ್ಲಿ ಸೈನಿಕರು ದಾರುಣವಾಗಿ ಸಾವಿಗೀಡಾದರೂ ಬಾಯಿ ತೆರೆಯದ ಪ್ರಧಾನಿ ಇರುವುದು ದುರ್ದೈವದ ಸಂಗತಿ' ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಇಚ್ಛಾಶಕ್ತಿಯ ಕೊರತೆಯಿದೆ. 1 ರೂಪಾಯಿಗೆ ನೀಡುತ್ತಿರುವ 1ಕೆಜಿ ಅಕ್ಕಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಶ್ರೀಮಂತರ ದಾಸ್ತಾನು ಮಳಿಗೆಗಳನ್ನು ತಲುಪುತ್ತಿದೆ ಎಂದು ದೂರಿದರು.
ಸಿಖ್ಖರನ್ನು ಕೊಂದದ್ದು ಯಾರು?: ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, `ರಾಷ್ಟ್ರ ಅಭದ್ರತೆಯನ್ನು ಎದುರಿಸುತ್ತಿದೆ. ಬೆಲೆ ಏರಿಕೆಗೆ ಸಾರ್ವಜನಿಕರು ತತ್ತರಿಸಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ ಎಂದರು.
ನಿದ್ದೆಯಲ್ಲಿಯೇ ಆಡಳಿತದ ಮುಕ್ಕಾಲು ಭಾಗ ಕಳೆದಿರುವ ಸಿದ್ದರಾಮಯ್ಯ ಅವರು ಮೋದಿಯನ್ನು `ನರಹಂತಕ' ಎಂದು ಟೀಕಿಸುತ್ತಾರೆ. 1984ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದೊಂಬಿಯಿಂದಾಗಿ ದೆಹಲಿಯಲ್ಲಿ ಸಾವಿರಾರು ಮಂದಿ ಸಿಖ್ ಸಮುದಾಯದವರು ಸತ್ತರು. ಈ ಘಟನೆ ಆಧರಿಸಿ ಕಾಂಗ್ರೆಸಿಗರನ್ನು ನರಭಕ್ಷಕರು, ನರರಾಕ್ಷರು ಎಂದು ಕರೆಯಬಹುದಲ್ಲವೆ? ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ನಿದ್ದೆಯಿಂದ ಎದ್ದು ಬಾಯಿಗೆ ಬಂದದ್ದನ್ನು ಹೇಳುತ್ತಾರೆ. ಇವರದು ನಿದ್ದೆ ಮಾಡುತ್ತಿರುವ ಸರ್ಕಾರ. ನಿದ್ದೆ ಸರ್ಕಾರಕ್ಕೆ ಬುದ್ಧಿ ಕಲಿಸಲು ಮತದಾರರು ಬಹುಮತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು' ಎಂದರು.ಮುಖಂಡ ಸಿ. ರಮೇಶ್ ಮಾತನಾಡಿ, `ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿ ನಕಲಿ ಕಾಂಗ್ರೆಸ್ ಕಟ್ಟಿಕೊಂಡಿರುವ ಸೋನಿಯಾ ಗಾಂಧಿಯನ್ನು ದೇಶದಿಂದ ಹೊರದಬ್ಬಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೊಂದು ಕಾಂಗ್ರೆಸ್ ಇದೆ. ಇಲ್ಲಿನ ಪಕ್ಷದವರು ಎಚ್ಚರದಿಂದಿರಬೇಕು.
9 ಬಾರಿ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯದ ನಾಯಕರಲ್ಲಿ ಪ್ರಮುಖರಾಗಿದ್ದಾರೆ. ಅವರನ್ನೂ ಈಗ ಕಡೆಗಣಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಮುಖಂಡರಾದ ನೂರೊಂದು ಶೆಟ್ಟಿ, ಎಸ್. ಬಾಲಸುಬ್ರಮಣ್ಯ, ಸುಧಾ ಜಯಕುಮಾರ್, ಕಾ.ಪು. ಸಿದ್ದಲಿಂಗ ಸ್ವಾಮಿ, ಎಸ್. ನಿರಂಜನಕುಮಾರ್, ನಂಜುಂಡಸ್ವಾಮಿ, ಕೆ.ಪಿ. ಮಹದೇವಸ್ವಾಮಿ, ಜಿ.ಎಸ್. ನಿತ್ಯಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.