ADVERTISEMENT

ರೇಷ್ಮೆ ಕೃಷಿ ವಿಸ್ತರಣೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:40 IST
Last Updated 7 ಜನವರಿ 2012, 6:40 IST

ಗುಂಡ್ಲುಪೇಟೆ: ಮೂರ‌್ನಾಲ್ಕು ವರ್ಷದ ಹಿಂದೆ ತಾಲ್ಲೂಕಿನ 350 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತಿತ್ತು. ಈಗ 200 ಹೆಕ್ಟೇರ್‌ಗೆ ಇಳಿದಿದೆ. ಇದು ರೇಷ್ಮೆ ಕೃಷಿಯ ವಿಸ್ತರಣೆಗೆ ಹಿನ್ನಡೆಯಾಗಿರುವುದನ್ನು ತೋರಿಸುತ್ತದೆ.

ರೇಷ್ಮೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಅರಿವು ಮೂಡಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ ಕಳೆದ 2 ತಿಂಗಳಿನಿಂದಲೂ ಖಾಲಿಯಾಗಿದೆ. ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿಯನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಲಾಗಿದೆ.

ತಾಲ್ಲೂಕಿನ ಕೊಡಗಾಪುರದಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಆದರೆ, ಉತ್ತಮ ಧಾರಣೆ ಸಿಗದ ಕಾರಣ ರೇಷ್ಮೆ ಬೆಳೆಗಾರರು ಅತಂತ್ರ ಸ್ಥಿತಿ ತಲು ಪಿದ್ದಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ರೇಷ್ಮೆ ಬೆಳೆಯಲು ಇಲಾಖೆಯಿಂದ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರ ಸಹಾಯಧನ ನೀಡುತ್ತಿದ್ದರೂ ರೇಷ್ಮೆ ಬೆಳೆಯಲು ರೈತರು ಮುಂದಾಗುತ್ತಿಲ್ಲ ಎನ್ನುತ್ತಾರೆ ರೇಷ್ಮೆ ಇಲಾಖೆಯ ಅಧಿಕಾರಿ ಶಿವಪಾದಪ್ಪ.

ಜಲ್ಲಿ ಕ್ರಷರ್ ಅವಾಂತರ: ಅಧಿಕಾರಶಾಹಿ ನೀಡುವ ಆದೇಶಗಳಿಗೆ ರೈತರು ತೊಂದರೆ ಅನುಭವಿಸುತ್ತಾರೆ ಎಂಬುದಕ್ಕೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ರೇಷ್ಮೆ ಬೆಳೆಗಾರ ಕುಮಾರ್ ನಿದರ್ಶನವಾಗಿದ್ದಾರೆ.

ಅವರು 10 ಲಕ್ಷ ರೂ ವೆಚ್ಚದಡಿ ತಮ್ಮ ಜಮೀನಿ ನಲ್ಲಿಯೇ ರೇಷ್ಮೆ ಸಾಕಾಣಿಕೆ ಕೇಂದ್ರ ನಿರ್ಮಿಸಿದ್ದರು. 2005-06ನೇ ಸಾಲಿನಲ್ಲಿ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಇದ್ದಾಗ ವಾರ್ಷಿಕವಾಗಿ 6ರಿಂದ 7 ಲಕ್ಷ ರೂವರೆಗೆ ಸಂಪಾದಿಸುತ್ತಿದ್ದರು. ಈಗ ಅವರ ಜಮೀನಿನ ಬಳಿ ಜಲ್ಲಿ ಕ್ರಷರ್ ತಳವೂರಿವೆ.

ಹೀಗಾಗಿ, ದೂಳು ಹಿಪ್ಪುನೇರಳೆ ಎಲೆಯ ಮೇಲೆ ಬೀಳುತ್ತಿದೆ. ಈ ಎಲೆ ತಿಂದರೆ ರೇಷ್ಮೆ ಹುಳು ಸಾಯುತ್ತವೆ. ಇದರಿಂದ ರೇಷ್ಮೆ ಬೆಳೆಯಲು ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿಗೆ ದೂರು ಸಲ್ಲಿಸಲಾಗಿತ್ತು.

ಪರಿಸರ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಒಂದೆಡೆ ರೇಷ್ಮೆ ಬೆಳೆಯುವಂತೆ ಅಧಿಕಾರಿಗಳು ಹೇಳುತ್ತಾರೆ. ಮತ್ತೊಂದೆಡೆ ಜಲ್ಲಿ ಕ್ರಷರ್ ಸ್ಥಾಪನೆಗೂ ಅನುಮತಿ ನೀಡುತ್ತಾರೆ. ಪರವಾನಗಿ ನೀಡುವ ಮೊದಲು ಕ್ರಷರ್ ಸ್ಥಾಪಿಸುವ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆಯೂ ಗಮನಹರಿಸುವುದಿಲ್ಲ. ಈಗ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಕುಮಾರ್.

`ನಾವೇ ರೇಷ್ಮೆ ಚಾಕಿ ಕೇಂದ್ರ ಸ್ಥಾಪಿಸಿ ತಾಲ್ಲೂಕು ಹಾಗೂ ಇತರೇ ಜಿಲ್ಲೆಯ ರೈತರಿಗೆ ತರಬೇತಿ ಕೂಡ ನೀಡುತ್ತಿದ್ದೆವು. ಉತ್ತಮ  ತಳಿಯ ರೇಷ್ಮೆ ಮೊಟ್ಟೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೆವು. ಬೆಂಗಳೂರು, ಸಾತನೂರು, ಕನಕಪುರ, ಮಳವಳ್ಳಿ, ಮಂಡ್ಯದ ರೈತರು ನಮ್ಮಲ್ಲಿ ರೇಷ್ಮೆ ಮೊಟ್ಟೆ ಖರೀದಿಸುತ್ತಿದ್ದರು. ಈಗ ಮೊಟ್ಟೆ ಉತ್ಪಾದನೆಗೆ ತೊಡಕಾಗಿದೆ. ಅಧಿಕಾರಿಗಳು ತಳೆಯುವ ಧೋರಣೆಗೆ ಕಷ್ಟಪಡುವಂತಾಗಿದೆ~ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.