ADVERTISEMENT

ವಿದ್ಯಾರ್ಥಿಗಳಿಗೆ ಇ ಲರ್ನಿಂಗ್ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 11:19 IST
Last Updated 8 ಮಾರ್ಚ್ 2018, 11:19 IST

ಕೊಳ್ಳೇಗಾಲ:‌ ‘ಮಕ್ಕಳು ಸದಾ ಲವಲವಿಕೆಯಿಂದ ಇರಬೇಕು. ಅವರು ನಿರಾಸಕ್ತರಾದರೆ ದೇಶದ ಅಭಿವೃದ್ಧಿಯಲ್ಲಿ ಹಿನ್ನಡೆಯುಂಟಾಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹದೇವಪ್ಪ ಅಭಿಪ್ರಾಯಪಟ್ಟರು.

ನಗರದ ರತ್ನ ಇಂಡಸ್ಟ್ರೀ ಆವರಣದಲ್ಲಿ ಬುಧವಾರ ನಡೆದ ರೋಟರಿ ಸಂಸ್ಥೆ ಮತ್ತು ರೋಟರಿ ಮಿಡ್‌ಟೌನ್ ವತಿಯಿಂದ ಸರ್ಕಾರಿ ಶಾಲೆಗಳಿಗೆ ಉಚಿತ ಇ ಲರ್ನಿಂಗ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೋಟರಿ ಸಂಸ್ಥೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ರೋಟರಿ ಸಂಸ್ಥೆ ನೀಡುವ ಸೌಲಭ್ಯಗಳನ್ನು ಮಕ್ಕಳಿಗೆ ಪ್ರಾಮಾಣಿಕವಾಗಿ ದೊರೆಯುವಂತೆ ಮಾಡಲು ಸಂಪೂರ್ಣ ಸಹಕಾರ ನೀಡು ತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ರೋಟರಿ ಸಂಸ್ಥೆಯ ಗವರ್ನರ್ ಬಿ.ಕೆ. ಪ್ರಕಾಶ್ ಮಾತನಾಡಿ, ತಾಲ್ಲೂಕಿನ 13 ಆಯ್ದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ₹6 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ- ಲರ್ನಿಂಗ್ ಕಿಟ್‌ಗಳನ್ನು ರೋಟರಿ ಸಂಸ್ಥೆ, ರೋಟರಿ ಮಿಡ್‌ಟೌನ್, ನಂಜನಗೂಡು ರೋಟರಿ ಸಂಸ್ಥೆ, ಚಾಮರಾಜನಗರ ರೊಟರಿ ಸಂಸ್ಥೆಗಳ ಹಾಗೂ ಎಸ್‌ಬಿಐ ಸಹಯೋಗದೊಡನೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಮಾತನಾಡಿದರು.

ಎಸ್‌ವಿಕೆ ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ಎಂಸಿಕೆಸಿ ಪ್ರೌಢಶಾಲೆಗೆ ಇದೇ ಸಂದರ್ಭದಲ್ಲಿ ಉಚಿತ ಇ-ಲರ್ನಿಂಗ್ ಕಿಟ್‌ಗಳನ್ನು ಡಿಡಿಪಿಐ ಮಹದೇವಪ್ಪ ವಿತರಿಸಿದರು.

ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಡಿ. ವೆಂಕಟಾಚಲ, ಕೆ. ಪುಟ್ಟರಸಶೆಟ್ಟಿ, ರೋಟರಿ ಅಧ್ಯಕ್ಷ ಕುಮಾರಸ್ವಾಮಿ, ರೋಟರಿ ಮಿಡ್‌ಟೌನ್ ಅಧ್ಯಕ್ಷ ಡೇವಿಡ್ ಫರ್ನಾಂಡಿಸ್, ಪ್ರವೀಣ್, ಮಹೇಶ್, ಮಾಜಿ ಅಧ್ಯಕ್ಷ ಟಿ.ಸಿ. ವೀರಭದ್ರಯ್ಯ, ಡಾ. ಉಮಾಶಂಕರ್, ಶಿವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.