ಯಳಂದೂರು: ಇಲ್ಲಿನ ಮಕ್ಕಳಿಗೆ ಚರ್ಮವ್ಯಾಧಿ ಕಾಡುತ್ತಿದೆ, ಆದರೆ ಸರಿಯಾದ ಚಿಕಿತ್ಸೆ ಇಲ್ಲ. ವಿದ್ಯಾರ್ಥಿಗಳು ಶಾಲೆ ಪಕ್ಕದ ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಾರೆ. ಅಡುಗೆ ಮಾಡುವ ಕೋಣೆ ಇದೆ ಆದರೆ ಸಿಲಿಂಡರ್ ಇಲ್ಲ. ಶುದ್ಧ ಕುಡಿಯುವ ನೀರು ನೀಡಲು ನಾಲ್ಕು ವಾಟರ್ ಫಿಲ್ಟರ್‌ಗಳಿವೆ. ಆದರೆ ಅವುಗಳ ಬಳಕೆ ಆಗುತ್ತಿಲ್ಲ... ಹೀಗೆ ಇಲ್ಲಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.
ಹೌದು, ತಾಲ್ಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದುಃಸ್ಥಿತಿಯ ಕಿರುನೋಟ. ಮಂಗಳವಾರ ತಾಪಂ ಅಧ್ಯಕ್ಷೆ ಗೌರಮ್ಮ ಮಹದೇವಸ್ವಾಮಿ ಭೇಟಿ ನೀಡದ ಸಂದರ್ಭದಲ್ಲಿ ಈ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳುತ್ತಾ ಹೋದರು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಈ ಶಾಲೆಯಲ್ಲಿ ಸುಮಾರು 10 ಮಕ್ಕಳಿಗೆ ಚರ್ಮವ್ಯಾಧಿ ಕಾಣಿಸಿಕೊಂಡಿದೆ. ಇಲ್ಲಿ ಒಬ್ಬ ನರ್ಸ್ ಕೂಡ ನೇಮಕ ಮಾಡಿಲ್ಲ. ಆದರೆ ಇಲ್ಲಿನ ಮಕ್ಕಳಿಗೆ ಬೇಕಾದ ಔಷಧಿ ಕೊಡಿಸುವಲ್ಲಿ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ದೂರು.
ಇಲ್ಲಿನ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಗಂಡು ಮಕ್ಕಳಿಗೆ ಪ್ರತ್ಯೇಕ ಸ್ನಾನದ ಮನೆ ಇಲ್ಲದ್ದರಿಂದ ಶಾಲಾ ಆವರಣದಲ್ಲೇ ಸ್ನಾನ ಮಾಡಬೇಕು. ಪರೀಕ್ಷೆ ನಡೆಯುತ್ತಿದ್ದರೂ, ಇಲ್ಲಿನ 6ನೇ ತರಗತಿ ಮಕ್ಕಳಿಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ಪಠ್ಯ ಪುಸ್ತಕಗಳನ್ನು ನೀಡಿಲ್ಲ. ಓದಿಗೆ ಹಿನ್ನಡೆಯಾಗಿದೆ ಎಂದು ಇಲ್ಲಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ವಿಜ್ಞಾನ ವಿಷಯದ ಬೋಧನೆಗೆ ಬೇಕಾದ ಪರಿಕರವೂ ಇಲ್ಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳು ವುದಾಗಿ ತಾಪಂ ಅಧ್ಯಕ್ಷರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.