ADVERTISEMENT

ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 8:20 IST
Last Updated 14 ಮಾರ್ಚ್ 2012, 8:20 IST

ಚಾಮರಾಜನಗರ: ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಓದನ್ನು ದೃಢಪಡಿಸುವ ಮೂಲಕ ಅವರ ಓದಿಗೆ ಪೋಷಕರ ನೆರವು ಪಡೆಯಲು ನಗರದ ಸರ್ಕಾರಿ ಬಾಲಕರ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕರು ಪೋಷಕರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಮಕ್ಕಳ ಓದಿನ ಬಗ್ಗೆ ತಂದೆ-ತಾಯಿಗೆ ಅರಿವು ಮೂಡಿಸುವುದರೊಂದಿಗೆ ಮಕ್ಕಳನ್ನು ಚೆನ್ನಾಗಿ ಓದುವಂತೆ ಪ್ರೇರೇಪಿಸುವ ಈ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಸರ್ಕಾರಿ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಪ್ರವೇಶ ಪಡೆಯುವುದು ಉಂಟು. ಅವರು ಎಸ್‌ಎಸ್‌ಎಲ್‌ಸಿ ಹಂತಕ್ಕೆ ಬರುವ ವೇಳೆಗೆ ಹಾಜರಾತಿ ಕಡಿಮೆಯಾಗಿ ಶಾಲೆ ಬಿಡುವವರೇ ಹೆಚ್ಚು. ಪ್ರತಿಷ್ಠಿತ ಶಾಲೆಗಳು ಒಂಬತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳಿಗೆ ವರ್ಗಾವಣೆ ಪತ್ರ ಕೊಟ್ಟು ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಆಶ್ರಯ ತಾಣ.

ಕೆಲವೊಮ್ಮೆ ಪೋಷಕರು ಕೂಲಿಗಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಅನಕ್ಷರತೆ ಪರಿಣಾಮ ಓದಿನ ಕಡೆಗೆ ಪ್ರೇರೇಪಿಸುವ ಆಸಕ್ತಿಯೂ ಇರುವುದಿಲ್ಲ. ಕೆಲವು ಪೋಷಕರು ಮಕ್ಕಳು 10ನೇ ತರಗತಿ ಓದುತ್ತಿದ್ದರೂ ಮನೆಯಲ್ಲಿ ಟಿವಿ ನೋಡುತ್ತ ಮಕ್ಕಳ ಓದಿಗೆ ಅಡ್ಡಿಯಾಗುವುದು ಉಂಟು. ಹಬ್ಬ, ಜಾತ್ರೆಯ ಹೆಸರಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ. ಪೋಷಕರು ಕೂಡ ತಮ್ಮ ಮಕ್ಕಳ ಕಲಿಕೆ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಸಂಬಂಧ ಶಾಲೆಗೆ ಭೇಟಿ ನೀಡಲೂ ಹಿಂಜರಿಯುತ್ತಾರೆ.

ಈ ಬಗ್ಗೆ ಚರ್ಚಿಸಿ ಹಾಜರಾತಿ ಕಡಿಮೆ ಪಡೆದ ಮಕ್ಕಳ ಪೋಷಕರೊಂದಿಗೆ ಚರ್ಚಿಸಲಾಗುತ್ತದೆ. ಮುಂಬರುವ ಪರೀಕ್ಷೆಗೆ ಧೈರ್ಯ ತುಂಬಲೂ ಮನೆ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ಉಪ ಪ್ರಾಂಶುಪಾಲ ರಾಚಯ್ಯ ಹಾಗೂ ಚಿನ್ನಸ್ವಾಮಿ ಅವರು, ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೋಷಕರ ಮತ್ತು ಮಕ್ಕಳ ಜತೆಗೂಡಿ ಚರ್ಚಿಸಿದರು.

ಶಿಕ್ಷಕರಾದ ನಾಗಲಕ್ಷ್ಮೀ, ಬಸವಲಿಂಗಪ್ಪ, ಮಲ್ಲೇಶ್, ಕ್ರಿಸ್ಟೋಪರ್, ಸುರೇಶ್, ಇನಾಂಮ್‌ದಾರ್, ಉಮಮಹೇಶ್ವರಿ ಅವರು ಪೋಷಕರನ್ನು ಸಂದರ್ಶಿಸಿ ಮಕ್ಕಳ ಕಲಿಕೆ ಪೂರ್ಣಗೊಳಿಸಲು ಹಾಗೂ ಸಭೆಗಳಿಗೆ ಹಾಜರಾಗುವಂತೆ ಜಾಗೃತಿ ಮೂಡಿಸಿದರು.

ಪೋಷಕರ ಸಭೆ: ಶಾಲೆಯಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಮಕ್ಕಳ ಸಮಸ್ಯೆ ಕುರಿತು ಚರ್ಚಿಸಲಾಯಿತು. ಮುಸ್ಲಿಂ ಎಜುಕೇಷನ್ ಅಸೋಸಿಯೇಷನ್ ಕಾರ್ಯದರ್ಶಿ ಸೈಯದ್ ಅಕ್ರಂ ಪಾಷಾ, ಆಯೂಬ್‌ಖಾನ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.