ADVERTISEMENT

ವಿದ್ಯುತ್ ಪರಿವರ್ತಕ ಅಳವಡಿಕೆಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 8:10 IST
Last Updated 13 ಆಗಸ್ಟ್ 2012, 8:10 IST

ಚಾಮರಾಜನಗರ: ಬರ ಪರಿಹಾರ ಕಾಮಗಾರಿಯಡಿ ಕುಡಿಯುವ ನೀರು ಪೂರೈಸಲು ಕೈಗೆತ್ತಿಕೊಂಡಿರುವ 171 ಕೊಳವೆಬಾವಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕೊರೆದಿರುವ 186 ಕೊಳವೆಬಾವಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ!

ಜಿಲ್ಲಾ ಪಂಚಾಯಿತಿಯ ಮಾಸಿಕ ಕೆಡಿಪಿ ಸಭೆಗಳಲ್ಲಿ ವಿದ್ಯುತ್ ಸಂಪರ್ಕ ಸಂಬಂಧ ನೀಡುವಂತಹ ಅಸ್ಪಷ್ಟ ಮಾಹಿತಿಯೇ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ಕಾಮಗಾರಿಗಳ ಸಭೆಯಲ್ಲಿಯೂ ಮುಂದುವರಿಯಿತು. ಆ ಮೂಲಕ ಸೆಸ್ಕ್‌ನ ಎಂಜಿನಿಯರ್‌ಗಳ ಬಣ್ಣವೂ ಬಯಲಾಯಿತು. ವಿದ್ಯುತ್ ಪರಿವರ್ತಕ ಸರಬರಾಗಿಲ್ಲ ಎಂಬ ಸಿದ್ಧಉತ್ತರ ನೀಡಲು ಎಂಜಿನಿಯರ್‌ಗಳು ಮುಂದಾದರು. ತಾತ್ಕಾಲಿಕವಾಗಿ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂಬ ಸಮಜಾಯಿಷಿ ನೀಡಿದರು.

ಎಂಜಿನಿಯರ್‌ಗಳ ಉತ್ತರಕ್ಕೆ ಈಶ್ವರಪ್ಪ ಅಸಮಾಧಾನಗೊಂಡರು. `ಇಷ್ಟು ದಿನ ಈ ಸಮಸ್ಯೆ ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಪರಿವರ್ತಕ ತಯಾರಿಸಲಾಗುತ್ತಿದೆ. ಹೀಗಿದ್ದರೂ, ಸಂಪರ್ಕ ಕಲ್ಪಿಸಲು ವಿಳಂಬ ಮಾಡಿದ್ದು, ಸರಿಯಲ್ಲ. ಕೂಡಲೇ, ತಾತ್ಕಾಲಿಕವಾಗಿ ಕೊಳವೆಬಾವಿಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ವಾರದೊಳಗೆ ಹೊಸದಾಗಿ ಪರಿವರ್ತಕ ಅಳವಡಿಸಿ ನೀರು ಪೂರೈಕೆಗೆ ಅನುಕೂಲ ಕಲ್ಪಿಸಬೇಕು~ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಶಿವರಾಂ ಮಾತನಾಡಿ, `ಬರ ಪರಿಹಾರದಡಿ ಕೊರೆದಿರುವ 171 ಕೊಳವೆಬಾವಿಗಳಿಗೆ ಹಣ ಕೂಡ ಪಾವತಿಸಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ನೀಡಿಲ್ಲ. ತ್ವರಿತವಾಗಿ ಪರಿವರ್ತಕ ಪೂರೈಸುವ ಬಗ್ಗೆ ಸೆಸ್ಕ್‌ನ ವ್ಯವಸ್ಥಾಪಕರೊಂದಿಗೆ ಚರ್ಚಿಸಿದ್ದೇನೆ~ ಎಂದು ಸಭೆಗೆ ವಿವರಿಸಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ್‌ಕುಮಾರ್ ಮನೋಳಿ ಮಾತನಾಡಿ, `ಜಿಲ್ಲಾ ಪಂಚಾಯಿತಿಯಿಂದ ಕೊರೆದಿರುವ 184 ಕೊಳವೆಬಾವಿಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ~ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, `ಜಿಲ್ಲೆಯಲ್ಲಿ ಒಟ್ಟು 136 ವಿದ್ಯುತ್ ಪರಿವರ್ತಕಗಳ ಬೇಡಿಕೆಯಿದೆ. ಈ ಕುರಿತು ಸೆಸ್ಕ್‌ನ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಅಗತ್ಯವಿರುವ ಪರಿವರ್ತಕ ಪೂರೈಸಲು ಕ್ರಮವಹಿಸಲಾಗುವುದು. ಕಾರ್ಯಪಾಲಕ ಎಂಜಿನಿಯರ್‌ಗಳು ಹೆಚ್ಚುವರಿಯಾಗಿ ಪರಿವರ್ತಕಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು~ ಎಂದು ಸೂಚಿಸಿದರು.

ಅಸಮಾಧಾನ: ಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹುದ್ದೆ ಖಾಲಿ ಇದ್ದರೂ ಭರ್ತಿ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

`ಅಧಿಕಾರಿಯ ಹುದ್ದೆ ಖಾಲಿಯಾದ ತಕ್ಷಣವೇ ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ಯೋಜನೆಗಳ ಅನುಷ್ಠಾನ ವಿಳಂಬವಾಗಲಿದೆ. ಸಂಬಂಧಪಟ್ಟ ಇಲಾಖೆಯ ಮುಖ್ಯ ಅಧಿಕಾರಿಯೇ ಸಭೆಯಲ್ಲಿ ಇಲ್ಲದಿದ್ದರೆ ನಾವು ಸಭೆ ನಡೆಯುವುದೇ ವ್ಯರ್ಥ. ನೀವು ಇಷ್ಟು ದಿನ ಏನು ಮಾಡುತ್ತಿದ್ದೀರಿ~ ಎಂದು ಸಿಇಒಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೋಮಶೇಖರಪ್ಪ, `ಈಗಾಗಲೇ, ಹುದ್ದೆ ಖಾಲಿ ಇರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮತ್ತೊಮ್ಮೆ ವರದಿ ಕಳುಹಿಸಿಕೊಡಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.