ADVERTISEMENT

ವಿಶೇಷ ಅಗತ್ಯವುಳ್ಳ ಮಕ್ಕಳ ಕಾಳಜಿ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:55 IST
Last Updated 4 ಆಗಸ್ಟ್ 2012, 5:55 IST

ಯಳಂದೂರು: `ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಎಲ್ಲರಂತೆ ಬದುಕನ್ನು ಕಟ್ಟಿಕೊಳ್ಳಲು ಪೋಷಕರು ಸಹಕಾರ ಹಾಗೂ ಸಮರ್ಥ ಆರೈಕೆ ಮಾಡಬೇಕು~ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಮಾವತಿ ಸಿದ್ಧರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿನಂಜುಂಡ ಮಾತನಾಡಿ, ದೈಹಿಕ ಹಾಗೂ ಮಾನಸಿಕ ನ್ಯೂನತೆ ಇರುವ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಸವಲತ್ತು ಒದಗಿಸಿದೆ. ಇದನ್ನು ಬಳಸಿಕೊಳ್ಳುವಲ್ಲಿ ಪೋಷಕರು ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಪರಿಕರ ನೀಡುವುದರ ಜೊತೆಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯವನ್ನು ನೀಡಿರುವುದರಿಂದ ಇದರ ಸದು ಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ತಾಲ್ಲೂಕಿನಲ್ಲಿ 194 ವಿದ್ಯಾರ್ಥಿಗಳನ್ನು ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇದರಲ್ಲಿ 6 ರಿಂದ 14 ವರ್ಷ ವಯೋಮಿತಿಯ ಎಲ್ಲಾ ವಿದ್ಯಾರ್ಥಿಗಳಿದ್ದಾರೆ. ಈ ಶಿಬಿರದಲ್ಲಿ ಆಯ್ಕೆಯಾದ ನ್ಯೂನತೆಯುಳ್ಳ ಮಕ್ಕಳಿಗೆ ತಮಿಳುನಾಡಿನ ಆಲಿಮ್‌ಕೋ ಸಂಸ್ಥೆಯ ಮೂಲಕ ಪರಿಕರಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಚಿನ್ನಮ್ಮಮರಯ್ಯ, ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಬಸವಣ್ಣ, ಎಸ್‌ಡಿಎಂಸಿ ಅಧ್ಯಕ್ಷೆ ರೂಪ, ಬಿಆರ್‌ಸಿ ರಾಜಪ್ಪ, ಶಿಕ್ಷಣ ಸಂಯೋಜಕ ವೀರಭದ್ರಸ್ವಾಮಿ, ಮುಖ್ಯ ಶಿಕ್ಷಕಿ ಎಂ.ಕೆ. ಮಂಜುಳಾ ತಾಲ್ಲೂಕಿನ ಬಿಆರ್‌ಪಿ ಹಾಗೂ ಸಿಆರ್‌ಪಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.