ADVERTISEMENT

ವಿಶ್ವ ಕನ್ನಡ ತೇರು ಕಳುಹಿಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 4:45 IST
Last Updated 19 ಫೆಬ್ರುವರಿ 2011, 4:45 IST

ಚಾಮರಾಜನಗರ: ಬೆಳಗಾವಿಯಲ್ಲಿ ಮಾರ್ಚ್ 11ರಿಂದ 13ರವರೆಗೆ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಜೃಂಭಣೆಯಿಂದ ವಿಶ್ವ ಕನ್ನಡ ತೇರು ಕಳುಹಿಸಿಕೊಡಲು ನಿರ್ಧರಿಸಲಾಗಿದೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಕನ್ನಡ ಸಮ್ಮೇಳನಕ್ಕೆ ಜಿಲ್ಲೆಯಿಂದ ಕನ್ನಡ ತೇರು ಕಳುಹಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಶಿಷ್ಯ ಪ್ರತಿಬಿಂಬಿಸುವ ಸ್ತಬ್ಧಚಿತ್ರ ಒಳಗೊಂಡ ಕನ್ನಡ ತೇರು ಸಿದ್ಧಪಡಿಸಬೇಕು. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸಂಚರಿಸಲು ಅವಕಾಶ ಮಾಡಿ ಕೊಡುವ ಮೂಲಕ ಕನ್ನಡ ನುಡಿ, ನಾಡು, ಸಾಹಿತ್ಯ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಗೊಳಿಸಲು ನಿರ್ಣಯಿಸಿತು.

ಮಾರ್ಚ್ 6ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಿಗ್ಗೆ 8.30ಗಂಟೆಗೆ ಕನ್ನಡದ ತೇರು ಸಂಚಾರಕ್ಕೆ ಚಾಲನೆ ನೀಡಬೇಕು. ಬಳಿಕ ತಾಳಬೆಟ್ಟ, ಕೌದಳ್ಳಿ, ಹನೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಬರಮಾಡಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಬೇಕು. ಮಾರ್ಚ್ 7ರಂದು ಕೊಳ್ಳೇಗಾಲದಿಂದ ಮುಡಿಗುಂಡ, ಮಾಂಬಳ್ಳಿ ಮಾರ್ಗವಾಗಿ ಯಳಂದೂರು, ಸಂತೇಮರಹಳ್ಳಿ ಮೂಲಕ ಚಾಮರಾಜನಗರಕ್ಕೆ ತೇರು ಆಗಮಿಸಲಿದೆ. 8ರಂದು ತೆರಕಣಾಂಬಿ ಮೂಲಕ ಗುಂಡ್ಲುಪೇಟೆಗೆ ತೆರಳಿ ವಾಸ್ತವ್ಯ ಹೂಡಲಿದೆ. ನಂತರ 9ರಂದು ಬೇಗೂರು ಮೂಲಕ ತೇರು ಬೀಳ್ಕೊಡಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ತೇರು ಸಂಚರಿಸುವ ಮಾರ್ಗಗಳನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯಿಂದ ತಳಿರುತೋರಣದೊಂದಿಗೆ ಅಲಂಕರಿಸಬೇಕು. ಆಯಾ ತಾಲ್ಲೂಕು ವ್ಯಾಪ್ತಿ ಕನ್ನಡ ಧ್ವಜ ಹಿಡಿದು ಎಲ್ಲರೂ ಕನ್ನಡ ತೇರು ಸ್ವಾಗತಿಸಬೇಕು ಎಂದರು.

ತೇರು ವಾಸ್ತವ್ಯ ಹೂಡುವ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಚಾಮರಾಜೇಶ್ವರ ದೇವಾಲ ಯದಲ್ಲಿ ವಾಸ್ತವ್ಯ ಹೂಡಲಿದ್ದು, ಅಂದು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು. ನಗರದ ಮುಖ್ಯವೃತ್ತ, ಕಟ್ಟಡಗಳಿಗೆ ವಿದ್ಯುತ್ ದೀಪಾಂಲಕಾರ ಮಾಡಬೇಕು ಎಂದರು.

ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಿಂದ ವಿಶ್ವ ಕನ್ನಡ ತೇರು ಬೀಳ್ಕೊಡುವ ಮೊದಲು ‘ಕನ್ನಡದ ನಡಿಗೆ ಕನ್ನಡದೆಡೆಗೆ’ ಎಂಬ ಘೋಷಣೆಯೊಂದಿಗೆ ಐದು ಕಿ.ಮೀ ನಡಿಗೆಯ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡದ ತೇರಿನ ಮೆರವಣಿಗೆಯಲ್ಲಿ ಅನ್ಯಭಾಷಿಕರು, ಧರ್ಮ, ಸಂಸ್ಕೃತಿಯ ಪ್ರಮುಖರು, ಗುರುಗಳು ಮತ್ತು ಶಾಲಾ ಮಕ್ಕಳು, ಕಲಾವಿದರು ಪಾಲ್ಗೊಳ್ಳಲು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ, ಗಡಿಜಿಲ್ಲೆ ಚಾಮರಾಜನಗರದಿಂದ ಮತ್ತೊಂದು ಗಡಿಜಿಲ್ಲೆಯಾದ ಬೆಳಗಾವಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಜಿಲ್ಲೆಯ ಕನ್ನಡ ತೇರು ಕಳುಹಿಸಿ ಕೊಡುವುದು ಸಂಭ್ರಮದ ಸಂಗತಿ. ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸೆಲ್ವಿಬಾಬು, ಸಿಇಓ  ಕೆ. ಸುಂದರನಾಯಕ್, ಕನ್ನಡಪರ ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ನಟರಾಜು, ಚಾ.ಗು. ನಾಗರಾಜ್, ಸುರೇಶ್‌ನಾಯಕ, ಹರವೆ ಗುರುಸ್ವಾಮಿ, ಎಂ.ಎಸ್. ಮೂರ್ತಿ, ಡಿಡಿಪಿಐ ಬಿ.ಎ. ರಾಜಶೇಖರ್, ಆಹಾರ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ಇ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.