ಚಾಮರಾಜನಗರ: `ಬದುಕಿನಲ್ಲಿ ಶಿಕ್ಷಣ ಇಲ್ಲದೆ ಜೀವನ ನಿರ್ವಹಣೆ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಅಂಗವಿಕಲ ಮಕ್ಕಳಿಗೆ ಶಿಕ್ಷಣ ದೊರೆಯಲು ಪೋಷಕರು, ಸಂಘ-ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರ ಅತ್ಯಗತ್ಯ' ಎಂದು ನಂಜೇದೇವನಪುರದ ಸಿಆರ್‌ಪಿ ಎಂ.ಡಿ. ಮಹದೇವಯ್ಯ ಹೇಳಿದರು.
ತಾಲ್ಲೂಕಿನ ಉತ್ತವಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಕಸ್ತೂರಿ ಅಂಗವಿಕಲರ ಮಹಾಸಂಘದ 4ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲ ಮಕ್ಕಳು ಶಿಕ್ಷಣ ಪಡೆಯಲು ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕು. ಅಂಗವಿಕಲರಿಗೆ ಸೌಲಭ್ಯ ಕಲ್ಪಿಸುವುದರೊಂದಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ವೈದ್ಯಾಧಿಕಾರಿ ಗೋವಿಂದ ನಾಯ್ಕ ಮಾತನಾಡಿ, ಅಂಗವಿಕಲ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಬೇಕಿದೆ. ಸಮಾಜದ ಮುಖ್ಯ ವಾಹಿನಿಗೆ ಅಂಗವಿಕಲರು ಬರುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು. ಚಿಗುರು ಅಂಗವಿಕಲರ ಸಂಘದ ಒಕ್ಕೂಟದ ಅಧ್ಯಕ್ಷೆ ಜಯಮ್ಮ, ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಂಯೋಜಕ ಪಿ. ಮೂರ್ತಿ, ಅಂಗನ ವಾಡಿ ಕಾರ್ಯಕರ್ತೆ ಶಶಿಕಲಾ, ಮಹಾ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಕುಮಾರ, ಮುಖ್ಯ ಶಿಕ್ಷಕಿ ಸಲತ್ ಮೇರಿ, ಜಯಮ್ಮ, ಗೌರಮ್ಮ, ಪುಟ್ಟಸ್ವಾಮಿ, ಬಸವರಾಜು, ಜ್ಯೋತಿ, ರವಿಕುಮಾರ ಮುದ್ದುಮಹಾದೇವ, ಬಸವಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.