ADVERTISEMENT

ಶೌಚಾಲಯ ನಿರ್ಮಾಣಕ್ಕೆ ಜೂ. 15ರ ಗಡುವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 9:50 IST
Last Updated 20 ಏಪ್ರಿಲ್ 2011, 9:50 IST

ಚಾಮರಾಜನಗರ: ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಫಲಾನುಭವಿಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ನಿಗದಿಪಡಿಸಿರುವ ಪ್ರೋತ್ಸಾಹಧನದ ಮೊತ್ತ ಎಷ್ಟು?
-ಸಭೆಯಲ್ಲಿ ಹೀಗೊಂದು ಪ್ರಶ್ನೆ ಆಂದೋಲನದ ನೋಡೆಲ್ ಅಧಿಕಾರಿಗಳಿಗೆ ಎದುರಾಯಿತು. ಅಧಿಕಾರಿಗಳು ಪರಸ್ಪರ ಮುಖ ನೋಡಿಕೊಂಡರು. ಮೂರು, ನಾಲ್ಕು ಸಾವಿರ ರೂ ಎಂಬ ಉತ್ತರ ಬಂತು. ಪ್ರಶ್ನೆ ಕೇಳಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೂ ಕಸಿವಿಸಿಯಾಯಿತು. ಆಂದೋಲನದ ಸಮರ್ಪಕ ಜಾರಿಗೆ ನೇಮಿಸಿರುವ ನೋಡೆಲ್ ಅಧಿಕಾರಿಗಳಿಗೆ ಮಾಹಿತಿಯ ಅರಿವು ಇಲ್ಲದಿರುವುದು ಚರ್ಚೆಗೆ ಗ್ರಾಸವಾಯಿತು.

ಕೊನೆಗೆ ಮಾತನಾಡಿದ ಸಿಇಒ ಸುಂದರನಾಯ್ಕಾ, ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯೂ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದೆ. ಫಲಾನುಭವಿಗೆ 3,750 ರೂ ಪ್ರೋತ್ಸಾಹಧನ ನೀಡಲಾಗುವುದು. ಬಿಪಿಎಲ್ ಹಾಗೂ ಎಪಿಎಲ್‌ನವರಿಗೆ ಪ್ರೋತ್ಸಾಹಧನ ನೀಡಬಹುದು. ಆದರೆ, ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೆ ಸರ್ಕಾರ 3 ಸಾವಿರ ರೂ ನೀಡಲಿದೆ’ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ 120 ಗ್ರಾ.ಪಂ.ಗಳಲ್ಲೂ ಜೂನ್ 15ರೊಳಗೆ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಮಾತನಾಡಿ, ‘ಉದ್ಯೋಗ ಖಾತ್ರಿಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಸಾಮಗ್ರಿ ಖರೀದಿಗೆ 2 ಸಾವಿರ ರೂ ನಿಗದಿಪಡಿಸಲಾಗಿದೆ. ಜತೆಗೆ, ಆರು ಮಾನವ ದಿನ ಸೃಜಿಸಿ, ಕೆಲಸ ನಿರ್ವಹಿಸುವುದು ಕಡ್ಡಾಯ’ ಎಂದರು.

‘ಕೆಲವೆಡೆ ಶಾಲಾ ಶೌಚಾಲಯದ ನಿರ್ವಹಣೆ ಸರಿಯಿಲ್ಲ. ನೀರಿನ ಸಮಸ್ಯೆಯಿದೆ. ಅಂಥ ಶಾಲೆಗಳ ಪಟ್ಟಿ ನೀಡಿದರೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಸೌಲಭ್ಯ ಕಲ್ಪಿಸಬಹುದು. ಜತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೌಚಾಲಯ ಉಪಯೋಗದ ಬಗ್ಗೆ ಫಲಕ ಪ್ರದರ್ಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬಹುದು. ಆಸ್ಪತ್ರೆ ಚೀಟಿಯಲ್ಲೂ ಶೌಚಾಲಯ ಮಹತ್ವ ತಿಳಿಸುವ ವಾಕ್ಯ ಮುದ್ರಿಸಬಹುದು’ ಎಂದು ಸಹಾಯಕ ಕಾರ್ಯದರ್ಶಿ ಪಿ.ಜಿ. ವೇಣುಗೋಪಾಲ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.