ADVERTISEMENT

ಸಖಿ ಮತಗಟ್ಟೆ: ಈ ಬಾರಿಯ ವಿಶೇಷ

​ಪ್ರಜಾವಾಣಿ ವಾರ್ತೆ
Published 12 ಮೇ 2018, 8:48 IST
Last Updated 12 ಮೇ 2018, 8:48 IST

ಚಾಮರಾಜನಗರ: ಈ ಬಾರಿಯ ಚುನಾವಣೆಯ ಬಹುದೊಡ್ಡ ವಿಶೇಷ ಎಂದರೆ ಸಖಿ ಮತಗಟ್ಟೆಗಳು ಅಥವಾ ಪಿಂಕ್ ಮತಗಟ್ಟೆಗಳು.

ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಇಂತಹ 10 ಮತಗಟ್ಟೆಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 6 ನಗರ ಪ್ರದೇಶದಲ್ಲಿದ್ದರೆ, 4 ಗ್ರಾಮಾಂತರ ಪ್ರದೇಶದಲ್ಲಿವೆ.

ಹನೂರಿನ ಸರ್ಕಾರಿ ಪ್ರಾಥಮಿಕ ಶಾಲೆ, ರಾಮಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳ್ಳೇಗಾಲದ ಮಹದೇಶ್ವರ ಐಟಿಐ ಕಾಲೇಜು, ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮತಿ ಕಮಲಮ್ಮ ಮತ್ತು ಕರಿಗೆಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆ, ಚಾಮರಾಜನಗರದ ಉಪ್ಪಾರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಳಿಪುರದ ಬೀಡಿ ಕಾಲೊನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮೂಡಲ ಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡ್ಲುಪೇಟೆಯ ಶ್ರೀ ಮದ್ದಾನೇಶ್ವರ ಪ್ರೌಢಶಾಲೆ, ಚಿಕ್ಕತು‍ಪ್ಪೂರಿನ ಸರ್ಕಾರಿ ಸಂಯುಕ್ತ ಶಾಲೆಗಳ ಮತಗಟ್ಟೆಗಳು ಸಖಿ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ADVERTISEMENT

ಏನಿದರ ವಿಶೇಷ:

‘ಪಿಂಕ್’ ಅಥವಾ ಗುಲಾಬಿ ಬಣ್ಣದಿಂದ ಇಡೀ ಮತಗಟ್ಟೆಗಳನ್ನು ಸಿಂಗರಿಸಿರುವುದು ವಿಶೇಷ. ನೋಡಿದರೆ ಸಾಕು, ಒಳಗೆ ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಈ ಮತಗಟ್ಟೆಗಳು ಕಣ್ಮನ ಸೆಳೆಯುವಂತಿವೆ. ಅಲ್ಲದೇ, ಒಳಗಿರುವ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಅಗಿರುವುದು ಮತ್ತೂ ವಿಶೇಷ. ವಿನೂತನವಾದ ಇಂತಹ ಮತಗಟ್ಟೆಗಳನ್ನು ನೋಡಲೆಂದೇ ಜನರು ಬರುತ್ತಾರೆ. ಈ ನೆವದಲ್ಲಾದರೂ ಮತದಾನ ಮಾಡುವರು ಎಂಬುದು ಚುನಾವಣಾ ಆಯೋಗದ ಲೆಕ್ಕಾಚಾರ. ಆದರೆ, ಶುಕ್ರವಾರ ಸಂಜೆಯಾದರೂ ಇಲ್ಲಿನ ಸಿಬ್ಬಂದಿಗೆ ಗುಲಾಬಿ ವಸ್ತ್ರಗಳು ತಲುಪಿರಲಿಲ್ಲ. ಚುನಾವಣಾ ಸಿಬ್ಬಂದಿಯಲ್ಲಿ ಯಾವ ಬಣ್ಣದ ವಸ್ತ್ರ ತೊಡಬೇಕು ಎನ್ನುವ ಗೊಂದಲ ಇನ್ನೂ ಇದ್ದದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.