ADVERTISEMENT

ಸರ್ಕಾರದ ಯೋಜನೆ ತಿಳಿಯಿರಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 9:55 IST
Last Updated 12 ಏಪ್ರಿಲ್ 2012, 9:55 IST

ಕೊಳ್ಳೇಗಾಲ: `ಸರ್ಕಾರದ ಕೈಗಾರಿಕೆ ಅಭಿವೃದ್ಧಿ ಯೋಜನೆಗಳ ಮಾಹಿತಿ ಗ್ರಾಮೀಣ ಜನತೆಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಗ್ರಾಮೀಣ ಜನತೆ ಸರ್ಕಾರದ ಯೋಜನೆಗಳನ್ನು ತಿಳಿಯಲು ಆಸಕ್ತಿ ತೋರದಿರುವುದೇ ವೈಫಲ್ಯಕ್ಕೆ ಕಾರಣ~ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಎಚ್.ಸಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗುರುಭವನದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗ, ನಿಸರ್ಗ ಸ್ವಉದ್ಯೋಗ ತರಬೇತಿ ಸಂಸ್ಥೆ ಸಹಯೋಗದೊಡನೆ ಏರ್ಪಡಿಸಿದ್ದ ಉದ್ಯಮ ಶೀಲತಾ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.

ಜನರು ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಪ್ರತಿಯೊಂದು ಇಲಾಖೆಗೂ ಖುದ್ದಾಗಿ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆಯಲು ಮುಂದಾಗಬೇಕು ಎಂದರು.

ಕೊಳ್ಳೇಗಾಲ ತಾಲ್ಲೂಕನ್ನು ಅತೀ ಹಿಂದುಳಿದ ತಾಲ್ಲೂಕನ್ನಾಗಿ ಘೋಷಿಸಿದೆ. ಯಾವುದೇ ಉದ್ಯಮ ಕೈಗೊಳ್ಳುವವರಿಗೆ ಶೇ.25ರಷ್ಷು ಸಬ್ಸಿಡಿ ನೀಡಲಾಗುತ್ತಿದೆ. ಅಲ್ಲದೇ ಅನೇಕ ಉಚಿತ ಸೌಲಭ್ಯ ಸಹ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲಾಖೆಯ ಅಧಿಕಾರಿಗಳಿಂದ ಪಡೆದು ಜನತೆ ಗುಡಿಕೈಗಾರಿಕೆ ಸ್ಥಾಪಿಸಲು ಮುಂದೆ ಬರಬೇಕು ಎಂದು ಹೇಳಿದರು.

ಖಾದಿ ಗ್ರಾಮೋದ್ಯೋಗ ಉಪ ನಿರ್ದೇಶಕ ಚೆನ್ನಕೇಶವಯ್ಯ ಮಾತನಾಡಿ, ಇಲಾಖೆಯಿಂದ ನಡೆಸಲಾಗುವ ವಿಚಾರಗೋಷ್ಠಿ, ಕ್ಷೇತ್ರೋತ್ಸವ ಮತ್ತು ವಸ್ತುಪ್ರದರ್ಶನಗಳಲ್ಲಿ ಜನರು ಭಾಗವಹಿಸಬೇಕು ಎಂದರು.

ಸುವರ್ಣಗ್ರಾಮ ಯೋಜನೆಯಡಿ ಪಟ್ಟಣದ ಎಸ್‌ಎಸ್ ಕಂಪ್ಯೂಟೆಕ್ ವತಿಯಿಂದ ತರಬೇತಿ ನೀಡಿದ 25 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಗುಡಿ ಕೈಗಾರಿಕೆಯ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಮೇಣದ ಬತ್ತಿತಯಾರಿಕೆ, ಗಂದಧ ಕಡ್ಡಿ ತಯಾರಿಕೆ, ಬಿದಿರು ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಶಿಬಿರಾಥಿಗಳಿಗೆ ತಿಳಿಸಿಕೊಡಲಾಯಿತು.

ಜಿಲ್ಲಾ ಕೈಗಾರಿಕೆ ಉತ್ತೇಜನಾಧಿಕಾರಿ ಸುರೇಶ್, ಕೈಗಾರಿಕಾ ವಿಸ್ತರಣಾಧಿಕಾರಿ ಎಚ್.ಆರ್. ಹರ್ಷವರ್ಧನ್, ರಾಜೇಂದ್ರಪ್ರಸಾದ್, ಸಂಕೇತ್, ಮಾಂಬಳ್ಳಿ ರಾಮು, ಪುಟ್ಟಮಾದಯ್ಯ ನಿಸರ್ಗ ಸ್ವ ಉದ್ಯೋಗ ತರಬೇತಿ ಸಂಸ್ಥೆ ವ್ಯವಸ್ಥಾಪಕ ಪಾರ್ಥಸಾರಥಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.