ADVERTISEMENT

ಸಾಧನೆಗೆ ಪರಿಶ್ರಮ ಅಗತ್ಯ: ಶರ್ಮ

​ಪ್ರಜಾವಾಣಿ ವಾರ್ತೆ
Published 3 ಮೇ 2011, 6:35 IST
Last Updated 3 ಮೇ 2011, 6:35 IST

ಕೊಳ್ಳೇಗಾಲ: ‘ವಿದ್ಯಾರ್ಥಿಗಳ ಸಾಧನೆಗೆ ಪರಿಶ್ರಮ ಮುಖ್ಯ. ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದು ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ತಿಳಿಸಿದರು.

ಪಟ್ಟಣದ ಗೀತಾ ಪ್ರಾಥಮಿಕ ಶಾಲಾ ಆವರಣದಲ್ಲಿ ಸರ್.ಸಿ.ವಿ. ರಾಮನ್ ವಿಜ್ಞಾನ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ “ವಿಜ್ಞಾನ ಬೇಸಿಗೆ” ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳಲ್ಲಿ ಸರಿಯಾದ ಶಿಕ್ಷಣ ನೀಡುವಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೋಷ ಇದೆ ಎಂದ ಅವರು, ಬೇಸಿಕ್ ಸೈನ್ಸ್ ಕಡೆಗಣನೆಗೆ ಒಳಗಾಗುತ್ತಿರು ವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಪಿಯುಸಿ ಮಕ್ಕಳು ತಾವೇ ಸ್ವತಃ ಕಂಡುಹಿಡಿಯುವ ಅವಿಷ್ಕಾರಗಳ ಬಗ್ಗೆ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.ಈ ಸ್ಪರ್ಧೆಯ ಮೊದಲ ಬಹುಮಾನ 1 ಲಕ್ಷ ರೂ. ಆಗಿದ್ದು ಆಸಕ್ತ ವಿದ್ಯಾರ್ಥಿ ಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಮುಂದಾಗಬೇಕು ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಆರ್. ವೀರಭದ್ರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ನಂಬದೇ ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳ ಬೇಕು ಎಂದು ತಿಳಿಸಿದರು.

ವಿಜ್ಞಾನ ಬೇಸಿಗೆ ಶಿಬಿರ ಯಶಸ್ವಿಯಾಗಿ ಮೂಡಿಬಂದ ಬಗ್ಗೆ ಗೌರವಾಧ್ಯಕ್ಷ ಡಾ.ಎಸ್.ಶಿವರುದ್ರ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿ, ಈ ಶಿಬಿರದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ಈ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಮೈದಳೆದಿರುವುದು ಒಂದು ಸಾಧನೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳಾದ ಪೂಜಾ, ತಿಲಕವತಿ, ಸುಂಗದ್, ರೋಹನ್, ಮಧುಮಿತ ಶಿಬಿರದಲ್ಲಿ ತಮ್ಮ ಅನುಭವಗಳನ್ನು  ಹಂಚಿಕೊಂಡರು. ಸ್ನೇಹ ಅರಸ್ ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ ಮಂಡಿಸಿದರು.ಮಧುಮಿತ ತಂಡ ‘ಈ ಜಲ ಈ ನೆಲ’ ವಿಜ್ಞಾನ ಗೀತೆ ಹಾಡಿದರು.


ಸನ್ಮಾನ: ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮಾ ಅವರನ್ನು ಕೊಳ್ಳೇಗಾಲ ಸರ್.ಸಿ.ವಿ.ರಾಮನ್ ವಿಜ್ಞಾನ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಸಮಿತಿ ಸದಸ್ಯ ನಾಗೇಶ್ ಅರಳಕುಪ್ಪೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಸುಂದ್ರಪ್ಪ, ಪೂರ್ಣಪ್ರಜ್ಞಾ ವಿದ್ಯಾ ಲಯ ಕಾರ್ಯದರ್ಶಿ ದಿನೇಶ್‌ಗುಪ್ತ, ರೋಟರಿ ಸಂಸ್ಥೆ ಕಾರ್ಯದರ್ಶಿ ಎಸ್. ನಾಗರಾಜು, ಜಚನಿ ಕಾಲೇಜು ಆಡಳಿತಾಧಿಕಾರಿ ಸಿದ್ದಮಲ್ಲು, ಸ್ಟೇಟ್ ಬ್ಯಾಂಕ್ ರಾಚಪ್ಪಾಜಿ, ಕೆನರಾಬ್ಯಾಂಕ್ ವ್ಯವಸ್ಥಾಪಕ ಬಾನುದಾಸ ಮಲ್ಯ, ವೇದಿಕೆ ಕಾರ್ಯದರ್ಶಿ ಶಿವಶಂಕರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT