ADVERTISEMENT

ಸಾರ್ವಜನಿಕ ಆಸ್ತಿ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:25 IST
Last Updated 5 ಫೆಬ್ರುವರಿ 2011, 8:25 IST

ಕೊಳ್ಳೇಗಾಲ: ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಸಾರ್ವಜನಿಕ ಆಸ್ತಿಯ ಒತ್ತುವರಿಯಾಗಿದೆ. ನಗರಸಭೆ ಮತ್ತು ಸರ್ಕಾರಿ ಸರ್ವೇ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಪಟ್ಟಣದ ವ್ಯಾಪ್ತಿಯ ಮರಡಿಗುಡ್ಡ ಮತ್ತು ಕೊಂಗಳಕೆರೆ ಒತ್ತುವರಿ ತೆರವುಗೊಳಿಸಬೇಕು. ಸರ್ಕಾರಿ  ಜಮೀನು ಕಬಳಿಸಿರುವ ಭೂಗಳ್ಳರ ವಿರುದ್ಧ ಹಾಗೂ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾ ಗಬೇಕು ಎಂದು ಒಕ್ಕೂಟದ ಸಂಚಾಲಕ ಶೇಖರ್ ಬುದ್ಧ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಜ. 28ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮರಡಿಗುಡ್ಡ ಸರ್ವೇ ನಂ. 700/ಎ1ರಲ್ಲಿ ಅತಿಕ್ರಮಣ ಮಾಡಿರುವ ಭೂಮಿಯನ್ನು ಸರ್ಕಾರಿ ಭೂಮಾಪಕರಿಂದ ಗುರುತಿಸಿ ನಕ್ಷೆ ತಯಾರಿಸಬೇಕು. ನಗರಸಭೆ ಕಚೇರಿಯಿಂದ ಖಾತೆ ಆಗಿದೆಯೇ? ಎಂಬ ಬಗ್ಗೆ ತಾಲ್ಲೂಕು ಆಡಳಿತದಿಂದ ಮಾಹಿತಿ ಕೇಳಬೇಕು. ಅನಧಿಕೃತ ಖಾತೆ ದಾಖಲಾಗಿದ್ದರೆ ಕೂಡಲೇ ರದ್ದುಪಡಿಸುವುದಾಗಿ ತಿಳಿಸಿರುವ ಕ್ರಮವನ್ನು ಸಂಘಟನೆ ಸ್ವಾಗತಿಸುತ್ತದೆ ಎಂದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಜವಾಬ್ದಾರಿ ಮತ್ತು ಪೂರ್ವಗ್ರಹಪೀಡಿತ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿರುವ ರಸ್ತೆ, ಜಮೀನು ಒತ್ತುವರಿ, ಅಕ್ರಮ ಕಟ್ಟಡ ತೆರವುಗೊಳಿಸುವುದರ ಜತೆಗೆ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊರವರ್ತುಲ ರಸ್ತೆ, ಉಪನಗರ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ನಡೆದಿರುವ ಅವ್ಯವಹಾರಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದಾಖಲೆ ಒದಗಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂವಿಧಾನಾತ್ಮಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ರೂಪಿಸಲಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಆರ್. ಮಹೇಶ್, ಒಕ್ಕೂಟದ ಸಂಚಾಲಕ ಜಗದೀಶ್. ಎಸ್. ಶಂಕನಪುರ, ಎಂ. ಸರ್ವೇಶ್, ಎಸ್. ಪ್ರಭುಸ್ವಾಮಿ, ಶೇಖರ್, ಮನೋಜ್ ಗಗನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.