ADVERTISEMENT

ಸುಂದರ ತಾಣಕ್ಕೆ ಅಭಿವೃದ್ಧಿಯೇ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 5:40 IST
Last Updated 26 ಫೆಬ್ರುವರಿ 2012, 5:40 IST

ಕೊಳ್ಳೇಗಾಲ: ಪಟ್ಟಣದ ಮುರಡಿ ಗುಡ್ಡದ ಮೇಲಿನ ಮಹದೇಶ್ವರಸ್ವಾಮಿ ದೇವಸ್ಥಾನ ಮಹತ್ತರ ದೇವಾಲಯವಾಗಿದೆ. ಜಾನಪದೀಯ ಹಿನ್ನೆಲೆಯುಳ್ಳ ಈ ದೇವಾಲಯ 200 ವರ್ಷಗಳಿಗೂ ಹಿಂದೆಯೇ ನಿರ್ಮಾಣಗೊಂಡಿದ್ದು, ಈವರೆಗೂ ದೇವಾಲಯ ಅಭಿವೃದ್ಧಿ ಕಂಡಿಲ್ಲ.

ಗುಡ್ಡದ ಮೇಲೆ ಅತ್ಯಂತ ಪುರಾತನ ಮುರಡಿ ಮಹದೇಶ್ವರಸ್ವಾಮಿ ದೇವಾಲಯ, ಮಲೆಮಹದೇಶ್ವರರು ಮಂಡಿಯೂರಿದ ಸ್ಥಳ, ಮಂಟಪ ಇದೆ. ಈ ಗುಡ್ಡದ ಕೆಳಗೆ 10ನೇ ಶತಮಾನದಲ್ಲಿಯೇ ನಿರ್ಮಾಣಗೊಂಡಿರುವ ಬೀರೇಶ್ವರ ದೇವಾಲಯ, ಪಕ್ಕದಲ್ಲಿ ರಾವಳೇಶ್ವರ ದೇವಾಲಯ ಹಾಗೂ ಸುತ್ತಲೂ ಬಡಾವಣೆಗಳು ತಲೆ ಎತ್ತಿವೆ. ಜೊತೆ ಜೊತೆಯಲ್ಲೇ ಮುರಡೀಗುಡ್ಡದ ಅತಿಕ್ರಮಣವೂ ಸಹ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಏಕೈಕ ಸುಂದರ ತಾಣ ಇದಾಗಿದೆ. ಜನತೆ ತಮ್ಮ ಬಿಡುವಿನ ವೇಳೆ ಕಳೆಯಲು ಇರುವ ಏಕೈಕ ತಾಣ. ಗುಡ್ಡ ಏರಿನಿಂತರೆ ತಣ್ಣನೆಯ ಗಾಳಿ, ಪಟ್ಟಣದ ವಿಹಂಗಮ ನೋಟ ಕಣ್ಮನಸೆಳೆಯುತ್ತದೆ. ಮನಸ್ಸಿಗೆ ಆಹ್ಲಾದ ತರುತ್ತದೆ.

ವಿಶೇಷ ಹಬ್ಬಗಳು ಸೇರಿದಂತೆ ಪ್ರತೀ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಈ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ಸಹಸ್ರಾರು ಭಕ್ತರು ಇಲ್ಲಿಗೆ ತೆರಳಿ ಪ್ರಕೃತಿ ಸೌಂದರ್ಯ ಸವಿದು ಪೂಜೆ ಸಲ್ಲಿಸುತ್ತಾರೆ.

ಸೂರ್ಯೋದಯಕ್ಕೂ ಮುನ್ನ ಮತ್ತು ಸಾಯಂಕಾಲ ಅನೇಕ ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳು ಗುಡ್ಡವನ್ನು ಏರಿ ಅಲ್ಲಿಯೇ ಯೋಗ, ವ್ಯಾಯಾಮ ಮಾಡಿ ಹಿಂದಿರುಗುತ್ತಾರೆ. ಈ ಗುಡ್ಡವನ್ನು ಅಭಿವೃದ್ಧಿಪಡಿಸುವ ಬಗ್ಗೆ ಈವರೆಗೆ ಯಾವುದೇ ಕ್ರಮ ಜರುಗಿಲ್ಲ. ಈ ಗುಡ್ಡ ಅಭಿವೃದ್ಧಿ ಪಡಿಸಿದಲ್ಲಿ ಪಟ್ಟಣದ ಸಾವಿರಾರು ಜನರು ಪ್ರತಿನಿತ್ಯ ಕುಟುಂಬ ಸಮೇತರಾಗಿ ಈ ಗುಡ್ಡ ಏರಿ ಉತ್ತಮ ಗಾಳಿ ಸೇವನೆ, ಪ್ರಕೃತಿ ಸೊಬಗನ್ನು ಸವಿಯುವಂತಾಗುತ್ತದೆ.

ಮುರಡಿಗುಡ್ಡ ಸಮರ್ಪಕ ರೀತಿಯಲ್ಲಿ ಅಭಿವೃದ್ಧಿಗೊಂಡಲ್ಲಿ ಉತ್ತಮ ಪ್ರವಾಸಿ ತಾಣವಾಗಿ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅನುಮಾನ ಇಲ್ಲ. ಕ್ಷೇತ್ರದ ಶಾಸಕರು ಸರ್ಕಾರದ ಗಮನ ಸೆಳೆದು ಈ ಮುರಡೀಗುಡ್ಡದ ಅಭಿವೃದ್ಧಿಗೆ ಮುಂದಾಗಬೇಕು ಎಂಬುದೇ ಬಿ.ಕೆ. ಪ್ರಕಾಶ್, ಸತ್ಯನಾರಾಯಣಗುಪ್ತಾ, ಎಸ್. ನಾಗರಾಜು ಮನವಿ.
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.