ADVERTISEMENT

ಹಗಲು ವೇಳೆ ಜಾತ್ರೆ ಆಚರಿಸಿ

ವನ್ಯಜೀವಿಗಳಿಗೆ ತೊಂದರೆ ಆಗದಂತೆ ಪೂಜೆ ನಡೆಸಲು ಅಧಿಕಾರಿಗಳ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:00 IST
Last Updated 15 ಜೂನ್ 2018, 11:00 IST

ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶವಾದ ಮದ್ದೂರು ವಲಯದ ಐನೋರು ಮಾರಮ್ಮ ಜಾತ್ರೆಯನ್ನು ಹಗಲು ವೇಳೆಯಲ್ಲಿ ಆಚರಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ.

ಐನೋರು ಮಾರಮ್ಮ ಜಾತ್ರೆಯ ಸಂಬಂಧ ಕಾಡಂಚಿನ ಗ್ರಾಮಗಳಾದ ಹೊಂಗಳ್ಳಿ, ಹಳ್ಳದಮಾದಹಳ್ಳಿ, ಚೆನ್ನಮಲ್ಲೀಪುರದ ಮುಖಂಡರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದರು.

‘ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾತ್ರೆಗೆ ರಾತ್ರಿ ವೇಳೆಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ಆದರೆ, ಜನರ ಭಾವನೆಗಳಿಗೆ ಸ್ಪಂದಿಸಿ, ಬೆಳಿಗ್ಗೆಯಿಂದ ಸಂಜೆವರೆಗೆ ಆಚರಣೆಗೆ ಅವಕಾಶ ನೀಡಲು ನಿರ್ಧರಿಸಿದ್ದೇವೆ. ವನ್ಯಜೀವಿಗಳಿಗೆ ಯಾವುದೇ ತೊಂದರೆ ಆಗದಂತೆ ಜಾತ್ರೆಯನ್ನು ಆಚರಿಸಬೇಕು’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಅಂಭಾಡಿ ಮಾಧವ್ ಸೂಚಿಸಿದರು.

ADVERTISEMENT

ರಾತ್ರಿ ವೇಳೆ ಕೊಂಡೋತ್ಸವ, ಕುಣಿತ, ಊಟದ ವ್ಯವಸ್ಥೆ ಹಾಗೂ ಧ್ವನಿವರ್ಧಕಗಳ ಬಳಕೆಯಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಕೊಂಡೋತ್ಸವ ಹಾಗೂ ಊಟದ ತಯಾರಿಕೆಗೆ ಬೆಂಕಿ ಹಾಕುವುದರಿಂದ ತೊಂದರೆ ಉಂಟಾಗಲಿದೆ ಎಂದು ಹೇಳಿದರು.

ಅರಣ್ಯ ಇಲಾಖೆಯವರು ಜನರ ಧಾರ್ಮಿಕ ನಂಬಿಕೆ ಹಾಗೂ ಸಂಸ್ಕೃತಿಗೆ ವಿರೋಧಿಗಳಲ್ಲ. ಆದರೆ, ದೇವರ ಹೆಸರಿನಲ್ಲಿ ಅರಣ್ಯ ಸಂಪತ್ತನ್ನು ನಾಶ ಮಾಡಬಾರದು ಎಂದು ಮನವಿ ಮಾಡಿದರು.

ರಾತ್ರಿ ವೇಳೆ ಜಾತ್ರೆ ಆಚರಣೆಗೆ ಅವಕಾಶ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಆದರೆ, ಇದಕ್ಕೆ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ.

ತಹಶೀಲ್ದಾರ್ ಎಚ್.ಆರ್.ಚಂದ್ರಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್‌ ಜಗದೀಶ್, ಸಹಾಯಕ ಸಂರಕ್ಷಣಾಧಿಕಾರಿ ಕೆ.ಪರಮೇಶ್, ನಟರಾಜು, ಅರಣ್ಯಾಧಿಕಾರಿ ಶೈಲೇಂದ್ರಕುಮಾರ್, ಸುನೀಲ್‍ಕುಮಾರ್, ಪುಟ್ಟರಾಜು, ನವೀನ್‍ಕುಮಾರ್, ಎಸ್‌ಐ ಬಿ.ಎಸ್.ಶಿವರುದ್ರ ಇದ್ದರು.

ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು
–ವಿಕ್ರಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.