ADVERTISEMENT

ಹಿರಿಯರ ಹಾದಿ; ಸುಭದ್ರ ಬದುಕಿಗೆ ಬುನಾದಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 8:00 IST
Last Updated 2 ಅಕ್ಟೋಬರ್ 2012, 8:00 IST

ಚಾಮರಾಜನಗರ: `ಹಿರಿಯರು ಹಾಕಿ ಕೊಟ್ಟಿರುವ ಹಾದಿಯಲ್ಲಿ ಕಿರಿಯರು ಸಾಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಷಕರನ್ನು ಬಾಳಿನ ಮುಸ್ಸಂಜೆ ಯಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯರ ಆಸೆ ಪೂರ್ಣಗೊಳಿಸುವುದು ಎಲ್ಲ ಮಕ್ಕಳ ಕರ್ತವ್ಯ. ಜತೆಗೆ, ಪುಣ್ಯದ ಕೆಲಸವೂ ಹೌದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿರಿಯ ನಾಗರಿಕರ ಒಳಿತಿಗಾಗಿ ಅನುಷ್ಠಾನಗೊಳಿಸಿರುವ ಹಲವು ಯೋಜನೆಗಳು ಸಮರ್ಪ ಕವಾಗಿ ತಲುಪಬೇಕಿದೆ. ಈ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಬಿ. ಪುಟ್ಟಬುದ್ಧಿ ಮಾತನಾಡಿ, ಪ್ರಸ್ತುತ ಹಿರಿಯರ ಮೇಲೆ ಅಗೌರವ ಹೆಚ್ಚುತ್ತಿರುವುದರಿಂದ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಮಕ್ಕಳು ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಕನಿಷ್ಠ ಸರ್ಕಾರದಿಂದ ಬರುವ ಸವಲತ್ತು ಕಲ್ಪಿಸಲು ಮುಂದಾಗುವುದು ಒಳಿತು ಎಂದು ಹೇಳಿದರು.

ಚಾಮರಾಜನಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಲ್ಲಿಕಾ ಮಾತ ನಾಡಿ, ಹಿರಿಯ ನಾಗರಿಕರು ಜ್ಞಾನ ಮತ್ತು ಅನುಭವದ ಸಂಗಮ. ಹಿರಿಯರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬೇಕಾದರೆ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ನಾಗರಿಕರಾದ ಪಂಡಿತ್ ಎ.ಎಸ್. ಭದ್ರಾಚಾರ್, ಚಿಕ್ಕಮಾದಪ್ಪ ಹಾಗೂ ರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಬಿ. ಬಸವರಾಜು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾ ಧಿಕಾರಿ ಎಚ್.ಕೆ. ರೇವಣೇಶ್, ಜಯರಾಮ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.