ADVERTISEMENT

ಹೊರನಾಡು: ಸಪ್ತಪದಿ ತುಳಿದ 31 ಜೋಡಿ

ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಮೇ 2018, 10:34 IST
Last Updated 5 ಮೇ 2018, 10:34 IST

ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಪ್ತಪದಿ ಯೋಜನೆಯಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 31 ಜೋಡಿ ಹಸೆಮಣೆ ಏರಿದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಈ ಜೋಡಿಗಳು ದೇವಸ್ಥಾನದಲ್ಲಿ ಅನ್ನಪೂರ್ಣೆಯ ದರ್ಶನ ಪಡೆದು ಆನಂತರ ಮಾಂಗಲ್ಯ ಮಂಟಪಕ್ಕೆ ಬಂದಿದ್ದರು. ಅಲ್ಲಿ ಅವರಿಗೆಂದು ನಿಗದಿಯಾಗಿದ್ದ ಸ್ಥಳದಲ್ಲಿ ವಧು– ವರರು ಮತ್ತು ಅವರ ಹತ್ತಿರದ ಸಂಬಂಧಿಕರು ಮುಹೂರ್ತಕ್ಕೆ ಕಾದರು. ಮುಹೂರ್ತದ ವೇಳೆಗೆ ಪುರೋಹಿತರು ಧ್ವನಿವರ್ಧಕದ ಮೂಲಕ ಮಂತ್ರ ಹೇಳಿದರು. ವಧು– ವರರು ಪರಸ್ಪರರ ಕೆನ್ನೆಗಳಿಗೆ ಜೀರಿಗೆ ಬೆಲ್ಲ ಸವರಿದರು. ಆ ನಂತರ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮಿ ಜೋಷಿ ದಂಪತಿ ಎಲ್ಲ ಜೋಡಿಗೂ ಚಿನ್ನದ ತಾಳಿ ಇದ್ದ ಮಾಂಗಲ್ಯ ಸರ ವಿತರಿಸಿದರು.

ವಧು ವರರು ಹಾರ ಬದಲಾಯಿಸಿಕೊಂಡ ನಂತರ ಮಾಂಗಲ್ಯಧಾರಣೆ ನಡೆಯಿತು. ವಧುವಿನ ಕಡೆಯವರು ವರನಿಗೆ ವಧುವನ್ನು ಧಾರೆ ಎರೆದುಕೊಟ್ಟರು. ಈ ವಿವಾಹದ ಎಲ್ಲ ವಿಧಿಯೂ 15 ನಿಮಿಷದಲ್ಲೇ ನಡೆದುಹೋಯಿತು.

ADVERTISEMENT

ವಧುವಿಗೆ ಸೀರೆ ಕುಪ್ಪಸ, ಬೆಳ್ಳಿ ಕಾಲುಂಗುರ, ವರನಿಗೆ ಶರ್ಟು, ಪಂಚೆ, ಶಲ್ಯವನ್ನು ದೇವಸ್ಥಾನದ ವತಿಯಿಂದ ನೀಡಲಾಗಿತ್ತು. ಆನಂತರ ಮಾತನಾಡಿದ ಜಿ.ಭೀಮೇಶ್ವರ ಜೋಷಿ, ಸರಳವಾಗಿ ಹಸಮಣೆ ಏರಿದ ವಧು– ವರರು ಜೀವನದಲ್ಲಿ ಅನ್ನಪೂರ್ಣೆಯ ಕೃಪೆಯಿಂದ ಸಮೃದ್ಧಿಯಾಗಿ ಸಂಸಾರ ನಡೆಸುವಂತಾಗಲಿ ಎಂದು ವರು ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.