ADVERTISEMENT

`ಹೊಸ ಪರಿವರ್ತಕ ಅಳವಡಿಕೆಗೆ ವಿಳಂಬ ಸಲ್ಲ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 10:19 IST
Last Updated 6 ಡಿಸೆಂಬರ್ 2012, 10:19 IST

ಚಾಮರಾಜನಗರ: `ಕುಡಿಯುವ ನೀರು ಪೂರೈಕೆಗೆ ಅಳವಡಿಸುವ ವಿದ್ಯುತ್ ಪರಿವರ್ತಕಗಳು ಸುಟ್ಟುಹೋದರೆ ವಿಳಂಬ ಮಾಡದೆ ತ್ವರಿತವಾಗಿ ಹೊಸ ಪರಿವರ್ತಕ ಅಳವಡಿಸಲು ಸೆಸ್ಕ್ ಅಧಿಕಾರಿಗಳು ಕ್ರಮವಹಿಸಬೇಕು' ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್. ಬಸವಣ್ಣ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯುತ್ ಪರಿವರ್ತಕ ಸುಟ್ಟುಹೋದರೆ ಹೊಸದಾಗಿ ಅಳವಡಿಸಲು ತೀವ್ರ ವಿಳಂಬ ಮಾಡಲಾಗುತ್ತಿದೆ. ಮಸಣಾಪುರ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ, ನಿಗದಿತ ಅವಧಿಯೊಳಗೆ ಪರಿವರ್ತಕ ಅಳವಡಿಸಬೇಕು ಎಂದರು.

ಕುಡಿಯುವ ನೀರಿಗೆ ಪ್ರತ್ಯೇಕ ಪರಿವರ್ತಕ ಅಳವಡಿಸಬೇಕು. ಆಗ ಕೃಷಿ ಪಂಪ್‌ಸೆಟ್‌ದಾರರು ಅಂತಹ ಪರಿವರ್ತಕದಿಂದ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿರುವುದಿಲ್ಲ. ಆದರೆ, ರೈತರು ವಿದ್ಯುತ್ ಬಾಕಿ ಪಾವತಿಸಲಿ ಎಂಬ ಉದ್ದೇಶವಿಟ್ಟುಕೊಂಡು ಹೊಸ ಪರಿವರ್ತಕ ಅಳವಡಿಸಲು ವಿಳಂಬ ಮಾಡಬಾರದು ಎಂದು ಹೇಳಿದರು.

105 ಅರ್ಜಿ ಬಾಕಿ
ತಾಲ್ಲೂಕಿನ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 105 ಅರ್ಜಿಗಳು ಬಾಕಿಯಿವೆ. ಈ ವಾರದೊಳಗೆ 15 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ಸಭೆಗೆ ತಿಳಿಸಿದರು.

ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ ವಿದ್ಯುತ್ ಪರಿವರ್ತಕದಿಂದಲೇ 10ಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ದಾರರು ಸಂಪರ್ಕ ಪಡೆದಿರುತ್ತಾರೆ. ಹೀಗಾಗಿ, ಪದೇ ಪದೇ ಪರಿವರ್ತಕ ಸುಟ್ಟುಹೋಗುತ್ತವೆ ಎಂದು ಹೇಳಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ, ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.