ADVERTISEMENT

‘ಪುರೋಹಿತಶಾಹಿ ಕುತಂತ್ರಕ್ಕೆ ಇತಿಶ್ರೀ ಹಾಡಿ’

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ– ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:57 IST
Last Updated 23 ಸೆಪ್ಟೆಂಬರ್ 2013, 9:57 IST

ಚಾಮರಾಜನಗರ: ‘ದೇಶದಲ್ಲಿ ಕೇವಲ ಶೇ 3ರಷ್ಟಿರುವ ಪುರೋಹಿತಶಾಹಿ ರಾಜಕೀಯ ಅಧಿಕಾರದಲ್ಲಿ ಮುಂಚೂಣಿಯಲ್ಲಿದೆ. ಇದರಿಂದ ಉಳಿದ ಎಲ್ಲ ಬಹುಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಬಹುಜನರು ಜಾಗೃತರಾಗಿ ವೈದಿಕಶಾಹಿಯ ಕುತಂತ್ರಗಳಿಗೆ ಇತಿಶ್ರೀ ಹಾಡಬೇಕಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌. ದ್ವಾರಕನಾಥ್‌ ಹೇಳಿದರು.

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಭಾನುವಾರ ಬಹುಜನ ವಿದ್ಯಾರ್ಥಿ ಸಂಘದಿಂದ ಪೆರಿಯಾರ್‌ ರಾಮಸ್ವಾಮಿ ನಾಯಕರ ಜಯಂತಿ ಅಂಗವಾಗಿ ನಡೆದ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬರಿ ಮಸೀದಿ ಧ್ವಂಸಗೊಳಿಸಲು ನಡೆದ ಹೋರಾಟದಲ್ಲಿ ಉಮಾಭಾರತಿ ಮಂಚೂಣಿ ವಹಿಸಿದ್ದರು. ಆಕೆಯದು ಬುಡಕಟ್ಟು ಸಮುದಾಯ. ಕೊನೆಗೆ, ಆಕೆ ಜೈಲು ಪಾಲಾಗಬೇಕಾಯಿತು. ಆದರೆ, ರಾಷ್ಟ್ರ ನಾಯಕಿಯಾಗಿ ಹೊರಹೊಮ್ಮಿದ್ದು, ಸುಷ್ಮಾ ಸ್ವರಾಜ್‌. ಈ ಹಿಂದೆಯೂ ಅಡ್ವಾಣಿಯನ್ನು ಸಂಘ ಪರಿವಾರದವರು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿ ದ್ದಾರೆ. ಈಗ ನರೇಂದ್ರ ಮೋದಿಯನ್ನು ಘೋಷಿಸಿದ್ದಾರೆ. ಮುಂದೆ ಏನಾಗುತ್ತದೋ ನೋಡಬೇಕಿದೆ ಎಂದರು.

ಪುರೋಹಿತಶಾಹಿಗಳಿಂದ ಸತ್ಯ ಮರೆಮಾಚುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಜಾಗೃತರಾಗಬೇಕಿದೆ. ದಲಿತರಿಗೆ ರಾಜಕೀಯ ಅಧಿಕಾರ ಸಿಗುತ್ತದೆ ಎಂದಾಗ ಹಿಂದುಳಿದ ಸಮುದಾಯದ ಜನರು ಕೈಜೋಡಿಸಬೇಕಿದೆ. ಆದರೆ, ಮೇಲ್ವರ್ಗ ದವರೊಂದಿಗೆ ಕೈಜೋಡಿಸಿ ದಲಿತರು ಅಧಿಕಾರಕ್ಕೆ ಬರಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಬದುಕಿರುವುದಿಲ್ಲ ಎಂದು ಯು.ಆರ್‌. ಅನಂತಮೂರ್ತಿ ಹೇಳಿದ್ದಾರೆ. ಲಂಕೇಶ್‌, ರಾಮದಾಸ್‌, ಪೂರ್ಣಚಂದ್ರ ತೇಜಸ್ವಿ ಬದುಕಿದ್ದರೆ ಅನಂತಮೂರ್ತಿ ಅವರ ಮಾತಿಗೆ ಹೆಚ್ಚಿನ ಬಲ ಬರುತ್ತಿತ್ತು’ ಎಂದು ಹೇಳಿದರು.
‘ನಾವು ದೇಶ ಬಿಟ್ಟು ಹೋಗುವುದಿಲ್ಲ ಎಂದು ಅವರು ಹೇಳುತ್ತಿರಲಿಲ್ಲ. ಮೋದಿಯೇ ದೇಶಬಿಟ್ಟು ಹೋಗಬೇಕು ಎಂಬ ಹೇಳಿಕೆ ನೀಡುತ್ತಿದ್ದರು’ ಎಂದರು.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ದೇಶದ ಪ್ರಧಾನಿಯಾದಾಗ ಮಾತ್ರ ಖಾಸಗಿ ವಲಯದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೆ ಮೀಸಲಾತಿ ಸಿಗುತ್ತದೆ ಎಂದು ಹೇಳಿದರು. ಬಿಜೆಪಿ ಹೆಡೆ ಎತ್ತಿದ ನಾಗರಹಾವು. ಕಾಂಗ್ರೆಸ್‌ ಹುಲ್ಲಿನಲ್ಲಿರುವ ಹಾವು. ಕಚ್ಚಿದರೂ ಗೊತ್ತಾಗುವುದಿಲ್ಲ. ಬಾಬರಿ ಮಸೀದಿ ಪ್ರಕರಣವನ್ನು ಹೊರಗೆ ತೆಗೆದಿದ್ದು, ಕಾಂಗ್ರೆಸ್‌ನ ರಾಜೀವ್‌ಗಾಂಧಿ. ಬಿಜೆಪಿ ಹೋರಾಟ ನಡೆಸಿತು. ಎಲ್ಲರಿಗೂ ಈ ಸತ್ಯ ಅರಿವಾಗಬೇಕಿದೆ ಎಂದರು.

ಕಾಂಗ್ರೆಸ್, ಬಿಜೆಪಿ ಸರ್ಕಾರ ಖಾಸಗೀಕರಣ, ಉದಾರೀಕರಣ ನೀತಿ ಜಾರಿಗೊಳಿಸಿದವು. ಇದರಿಂದ ಪರಿಶಿಷ್ಟರು, ಹಿಂದುಳಿದವರಿಗೆ ಉದ್ಯೋಗಾವಕಾಶ ಕಡಿಮೆ ಯಾಯಿತು ಎಂದು ದೂರಿದರು.

ಸರ್ಕಾರ ಸಣ್ಣ ಹುದ್ದೆಗಳ ಆಯ್ಕೆಗೆ ಮೀಸಲಾತಿ, ಮೆರಿಟ್ ಮಾನದಂಡ ಅನುಸರಿಸುತ್ತಿದೆ. ಆದರೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಆಯ್ಕೆಗೆ ಯಾವುದೇ ಮಾನದಂಡವಿಲ್ಲ. ಇದು ನೋವಿನ ಸಂಗತಿ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆಯ ಜತೆಗೆ ಹೊಸದಾಗಿ ಉದಾರೀಕರಣ, ಜಾಗತೀಕರಣ ನೀತಿ ಅಂಟಿಕೊಂಡಿವೆ. ಇವು ದೇಶದ ದಲಿತರು, ಅಲ್ಪಸಂಖ್ಯಾತರು ಹಾಗೂ ಶ್ರಮಜೀವಿಗಳನ್ನು ತುಳಿಯುವ ಕೆಲಸ ಮಾಡುತ್ತಿವೆ ಎಂದರು.

ವಿದ್ಯಾರ್ಥಿನಿ ಎಸ್.ಕೆ. ಗೌರಿ ಪ್ರಬಂಧ ಮಂಡಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತರಾಜ್, ಮಾತಾಂಗ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಶಿವಕುಮಾರ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಶೋಯಬ್‌ ಖಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.