
ಚಾಮರಾಜನಗರ: ‘ಮಹಿಳೆ ತನ್ನಲ್ಲಿರುವ ತ್ಯಾಗ ಮನೋಭಾವದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ’ ಎಂದು ಸಂತ ಪೌಲರ ದೇವಾಲಯದ ಧರ್ಮಗುರು ಕ್ರಿಸ್ಟಿ ಸ್ಯಾಂ ಹೇಳಿದರು. ನಗರದ ಸಂತ ಜೋಸೆಫರ ಸೇವಾ ಸಂಸ್ಥೆಯಿಂದ ಈಚೆಗೆ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದಲ್ಲಿ ಹೆಣ್ಣಿನ ಪಾತ್ರ ಹೆಚ್ಚಿದೆ. ಹಿಂದೆ ಮಹಿಳೆಯರು ನಾಲ್ಕು ಗೋಡೆಗೆ ಸೀಮಿತರಾಗಿದ್ದರು. ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಳೆ ಅಭಿವೃದ್ಧಿ ಹೊಂದಿದರೆ ಮಾತ್ರ ಕುಟುಂಬ ಪ್ರಗತಿ ಕಾಣಲಿದೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ರಮಾ ಮಾತನಾಡಿ, ಆಧುನಿಕಯುಗದಲ್ಲಿ ಮಹಿಳೆಯರು ಪುರುಷನಿಗೆ ಸರಿಸಮಾನವಾಗಿ ಎಲ್ಲ ರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಪರಕೀಯರೊಂದಿಗೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ಮಹಿಳೆಯರನ್ನು ನಾವಿಂದು ಸ್ಮರಿಸಬೇಕಾಗಿದೆ ಎಂದ ಅವರು, ಮಹಿಳೆಯರು ಸ್ತ್ರೀಶಕ್ತಿ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.
ಎಸ್ಎಂಎಂಐ ಸಂಸ್ಥೆ ಮುಖ್ಯಸ್ಥೆ ಆಲಿನ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಆಲಿನ್, ರಮಾ, ರಜಿನಾ, ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಶಾಲೆಯ ಮುಖ್ಯೋಪಾಧ್ಯಾಯಿನಿ ಉತ್ತರಿಕಾ ಮೇರಿ, ರಜಿನಾ, ಅನ್ನಮೇರಿ, ಅಸಂತ, ರಜಿನಾ, ಫ್ಲೋರಿನಾ, ನಾಗೇಶ್ ಸೋಸ್ಲೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.