ADVERTISEMENT

ಕೊಳ್ಳೇಗಾಲ: ಕೋವಿಡ್‌ ಗೆದ್ದ 15 ದಿನಗಳ ಮಗು

ತಂದೆ, ತಾಯಿಗೂ ಸೋಂಕು, 10 ದಿನಗಳಲ್ಲಿ ಸೋಂಕು ಮುಕ್ತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 13:57 IST
Last Updated 4 ಆಗಸ್ಟ್ 2020, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ 15 ದಿನಗಳ ಗಂಡು ಮಗುವೊಂದು ಕೋವಿಡ್‌–19ನಿಂದ ಗುಣಮುಖವಾಗಿದೆ.

ಮಗುವಿನ ತಂದೆ ಹಾಗೂ ತಾಯಿ ಆಗಿರುವ ತಿಲಕ್‌ರಾಜ್‌ ಹಾಗೂ ದೀಪು ಅವರು ಕೂಡ ಸೋಂಕಿಗೆ ತುತ್ತಾಗಿ ಈಗ ಗುಣಮುಖರಾಗಿ ಮೂರು ದಿನಗಳ ಹಿಂದೆ ಮನೆಗೆ ಮರಳಿದ್ದಾರೆ.

ತಿಲಕ್‍ರಾಜ್ ಮೈಸೂರಿನ ಅರಮನೆಯಲ್ಲಿ ಉದ್ಯೋಗಿಯಾಗಿದ್ದಾರೆ. 12 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕೆಮ್ಮು, ನೆಗಡಿ ಬಂದಿತ್ತು. ಜೊತೆಗೆ ಆಹಾರದ ರುಚಿ ಗೊತ್ತಾಗುತ್ತಿರಲಿಲ್ಲ. ತಕ್ಷಣ ಅವರುನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಎರಡು ದಿನಗಳ ಬಳಿಕ ಸೋಂಕು ಧೃಡಪಟ್ಟಿತ್ತು.

ADVERTISEMENT

ಪರೀಕ್ಷೆ ಮಾಡಿಸಿಕೊಳ್ಳುವ ಮೊದಲುತಿಲಕ್‍ರಾಜ್ ಅವರು ಕೆಲವು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದ ತಮ್ಮ ಪತ್ನಿ ಹಾಗೂ ಮತ್ತು ಮಗುವಿನ ಯೋಗಕ್ಷೇಮ ವಿಚಾರಿಸಲು ಮಧುವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯೇ ಉಳಿದಿದ್ದರು.

ತಿಲಕ್‍ರಾಜ್ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟ ಬಳಿಕ ತಾಲ್ಲೂಕಿನ ಆರೋಗ್ಯಾಧಿಕಾರಿಗಳು ತಿಲಕ್‍ರಾಜ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ ದೀಪು ಹಾಗೂ ಮಗುವಿನ ತಪಾಸಣೆ ನಡೆಸಿದರು. ಇಬ್ಬರಲ್ಲೂ ಕೋವಿಡ್‌–19 ಇರುವುದು ದೃಢಪಟ್ಟಿತ್ತು.

ಮಗು ಹುಟ್ಟಿ 15 ದಿನಗಳಾಗಿದ್ದರಿಂದ ಪತ್ನಿಗೆ ತುಂಬಾ ಭಯವಾಯಿತು. ನಾನೂ ಗಾಬರಿಗೊಳಗಾದೆ. ಮೂವರೂ ಕೋವಿಡ್‌ ಆಸ್ಪತ್ರೆಗೆ ದಾಖಲಾದೆವು.ಅಲ್ಲಿನ ವಾತಾವಾರಣ ಮತ್ತು ಸೋಂಕು ಇರುವ ಮಕ್ಕಳನ್ನು ನೋಡಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಿತು. ಈ ಕಾಯಿಲೆ ಗುಣವಾಗಬಹುದು ಎಂಬ ವಿಶ್ವಾಸ ಮೂಡಿತು. ಏಳು ದಿನಗಳ ಕಾಲ ಇಲ್ಲಿನ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದರು. ವೈದ್ಯರು ಗುಣವಾಗಿದ್ದೀರಿ ಎಂದಾಗ ಮನಸ್ಸಿನಲ್ಲಿದ್ದ ಚಿಂತೆ ದೂರವಾಯಿತು. ಮನೆಯಲ್ಲಿ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಮಗು ಸೇರಿದಂತೆ ಎಲ್ಲರೂ ಆರೋಗ್ಯದಿಂದ ಇದ್ದೇವೆ. ಕೋವಿಡ್‌–19 ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ’ ಎಂದು ತಿಲಕ್‌ರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.