ADVERTISEMENT

ಚಾಮರಾಜನಗರ: ಮೂರು ದಿನಗಳಿಂದ ಬಾರದ ಕೋವಿಡ್‌–19 ಪರೀಕ್ಷಾ ವರದಿ

1,684 ಜನರ ವರದಿ ಬಾಕಿ, ಸೋಂಕು ಇನ್ನಷ್ಟು ಹರಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 3:50 IST
Last Updated 1 ಜುಲೈ 2020, 3:50 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಚಾಮರಾಜನಗರ: ಸಮೀಪದ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಕೋವಿಡ್‌–19 ಪ್ರಯೋಗಾಲಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕಾರಣ, ಬೆಂಗಳೂರಿಗೆ ಕಳುಹಿಸಲಾಗಿರುವ 1,684 ಗಂಟಲ ದ್ರವ ಮಾದರಿಗಳ ವರದಿ ಇನ್ನೂ ಬಂದಿಲ್ಲ.

ಪ್ರಯೋಗಾಲಯದ ತಂತ್ರಜ್ಞೆಯೊಬ್ಬರು ಕೋವಿಡ್‌–19ಗೆ ತುತ್ತಾಗಿರುವುದರಿಂದ ಪ್ರಯೋಗಾಲಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕಿತ ಆರು ಸಹೋದ್ಯೋಗಿಗಳು ಹೋಮ್‌ ಕ್ವಾರಂಟೈನ್‌ ನಲ್ಲಿರುವುದರಿಂದ ಪ್ರಯೋಗಾಲಯ ಮತ್ತೆ ಕಾರ್ಯಾರಂಭ ಮಾಡಿಲ್ಲ.

ಜಿಲ್ಲೆಯಲ್ಲಿ ಈಗ ಗಂಟಲ ದ್ರವ ಮಾದರಿ ಸಂಗ್ರಹ ದಿನೇ ದಿನೇ ಹೆಚ್ಚುತ್ತಿದ್ದು, 350ರಿಂದ 400 ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲವನ್ನೂ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಮೂರು ದಿನಗಳಿಂದ ಅಲ್ಲಿಯ ವರದಿ ಬಂದಿಲ್ಲ.

ADVERTISEMENT

ಈಗಾಗಲೇ ಸೋಂಕು ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂ‍ಪರ್ಕಿತರು, ಕಂಟೈನ್‌ಮೆಂಟ್‌ ವಲಯದ ನಿವಾಸಿಗಳು ಸೇರಿದಂತೆ ಹಲವರ ಗಂಟಲ ದ್ರವಗಳನ್ನು ಸಂಗ್ರಹಿಸಲಾಗಿದೆ.

ನಿರೀಕ್ಷಿತ ಸಮಯಕ್ಕೆ ವರದಿ ಬಾರದೇ ಇರುವುದರಿಂದ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ. ಮೂರು ದಿನಗಳಿಂದ ಯಾರಿಗೆಲ್ಲ ಸೋಂಕು ತಗುಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದಾಗಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದಕ್ಕೂ ಆಗುತ್ತಿಲ್ಲ.

ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿರುವ ಜನರು ಮೂರು ದಿನಗಳಿಂದ ಹೊರಗಡೆ ಓಡಾಡುವ ಸಾಧ್ಯತೆ ಇದ್ದು, ಒಂದು ವೇಳೆ ಅವರಿಗೆ ಸೋಂಕು ತಗುಲಿದರೆ, ಇತರ ಕಡೆಗಳಿಗೂ ಹರಡಲಿದೆ ಎಂಬ ಆತಂಕದಲ್ಲಿ ಅಧಿಕಾರಿಗಳು ಹಾಗೂ ವೈದ್ಯರು ಇದ್ದಾರೆ.

392 ಜನರ ಮೇಲೆ ನಿಗಾ: ಈ ಮಧ್ಯೆ, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 32 ವ್ಯಕ್ತಿಗಳ 186 ಪ್ರಾಥಮಿಕ ಸಂಪರ್ಕಿತರು ಹಾಗೂ 206 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಒಟ್ಟು 392 ಮಂದಿ ಮನೆ ಕ್ವಾರಂಟೈನ್‌ನಲ್ಲಿ ಇದ್ದಾರೆ. ಜಿಲ್ಲಾಡಳಿತ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.

ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರ

ಈ ಮಧ್ಯೆ, ನಗರದ ಕೋವಿಡ್‌–19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರ ಪೈಕಿ ಒಬ್ಬರನ್ನು ಮಂಗಳವಾರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

‘ಗುಂಡ್ಲುಪೇಟೆ ಮಹದೇವಪ್ರಸಾದ್‌ ನಗರದ ನಿವಾಸಿ ರೋಗಿ ಸಂಖ್ಯೆ 8,311 ಅವರ ಪ್ರಾಥಮಿಕ ಸಂಪರ್ಕಿತರಲ್ಲಿ ಒಬ್ಬರಾದ 50 ವರ್ಷದ ವ್ಯಕ್ತಿಯ ಆರೋಗ್ಯ ಸುಧಾರಿಸಿರುವುದರಿಂದ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘‍ಪ್ರಜಾವಾಣಿ’ಗೆ ತಿಳಿಸಿದೆ.

ಮಹದೇವಪ್ರಸಾದ್‌ ನಗರ ನಿವಾಸಿ 45 ವರ್ಷ ಮಹಿಳೆ ಹಾಗೂ 70 ವರ್ಷದ ವೃದ್ಧರೊಬ್ಬರು ಇನ್ನೂ ಐಸಿಯುನಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.